ಒಂದೂ ಟೆಸ್ಟ್​ ಆಡದೆ ಹೊರಬಿದ್ದ ಅಭಿಮನ್ಯು ಈಶ್ವರನ್! ಏನಿದು ಅನ್ಯಾಯ ಎಂದ ಫ್ಯಾನ್ಸ್​...

web eeshwaran
Published on

ನವದೆಹಲಿ: ಕಳೆದ ಇಂಗ್ಲೆಂಡ್​ ಪ್ರವಾಸಕ್ಕೆ ಭಾರತ ತಂಡದಲ್ಲಿದ್ದ ಬ್ಯಾಟರ್​ ಅಭಿಮನ್ಯು ಈಶ್ವರನ್​, ವೇಗಿಗಳಾದ ಆಕಾಶ್​ದೀಪ್​, ಅರ್ಷದೀಪ್​ ಸಿಂಗ್​, ಅಂಶುಲ್​ ಕಾಂಬೋಜ್​ ಮತ್ತು ಶಾರ್ದೂಲ್​ ಠಾಕೂರ್​ರನ್ನೂ ವಿಂಡೀಸ್​ ವಿರುದ್ಧ ಸರಣಿಗೆ ಕೈಬಿಡಲಾಗಿದೆ. ಇಂಗ್ಲೆಂಡ್​ಗೆ 18 ಆಟಗಾರರೊಂದಿಗೆ ಭಾರತ ತೆರಳಿದ್ದರೆ, ತವರಿನ ಸರಣಿಯಲ್ಲಿ 15 ಆಟಗಾರರೊಂದಿಗೆ ಆಡಲಿರುವುದು ಕೂಡ ಇದಕ್ಕೆ ಕಾರಣವಾಗಿದೆ. ಆದರೆ ಬಂಗಾಳದ ಈಶ್ವರನ್​, ಕಳೆದ ಆಸೀಸ್​, ಇಂಗ್ಲೆಂಡ್​ ಪ್ರವಾಸದ ತಲಾ 5 ಟೆಸ್ಟ್​ ಪಂದ್ಯಗಳ ಸರಣಿಗೆ ತಂಡದಲ್ಲಿದ್ದರೂ, ಒಂದೂ ಪಂದ್ಯ ಆಡುವ ಅವಕಾಶ ಪಡೆದಿರಲಿಲ್ಲ. ಹೀಗಾಗಿ ಅವರನ್ನು ಕೈಬಿಟ್ಟಿರುವುದು ನಿಷ್ಠುರ ನಡೆಯಾಗಿದೆ.

ಕಳೆದ 3-4 ವರ್ಷಗಳಿಂದ 30 ವರ್ಷದ ಈಶ್ವರನ್​, ಭಾರತ ತಂಡದೊಂದಿಗೆ ಹಲವು ಪ್ರವಾಸಗಳಿಗೆ ತೆರಳಿದ್ದರು. ಆದರೂ, ದೇಶೀಯ ಕ್ರಿಕೆಟ್​ನಲ್ಲಿ 27 ಶತಕ ಸಿಡಿಸಿದ ಬ್ಯಾಟರ್​, ಒಂದೂ ಟೆಸ್ಟ್​ ಆಡದೆ ಹೊರಬಿದ್ದಿರುವುದು ವಿಪರ್ಯಾಸ. 3ನೇ ಆರಂಭಿಕನಾಗಿ ಎನ್​. ಜಗದೀಶನ್​ರನ್ನೂ ಪರಿಗಣಿಸಿರುವುದರಿಂದ ಈಶ್ವರನ್​ಗೆ ಮತ್ತೆ ಅವಕಾಶ ಲಭಿಸುವುದು ಅನುಮಾನ ಎಂದೂ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ತಿಳಿಸಿದರು. ಇದರ ಬೆನ್ನಲ್ಲೇ ಕ್ರಿಕೆಟ್​ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ 'ಜಸ್ಟಿಸ್​ ಫಾರ್ ಅಭಿಮನ್ಯು' ಅಭಿಯಾನ ಆರಂಭಿಸಿದ್ದು, ಒಂದೂ ಟೆಸ್ಟ್​ ಆಡುವ ಅವಕಾಶ ನೀಡದೆ ಹೊರದಬ್ಬಿದ ಕ್ರಮವನ್ನು ಪ್ರಶ್ನಿಸಿದ್ಧಾರೆ.

ದಕ್ಷಿಣ ಆಫ್ರಿಕಾ ಸರಣಿಗೆ ಪಂತ್​ ಫಿಟ್​

ಇಂಗ್ಲೆಂಡ್​ ಪ್ರವಾಸದಲ್ಲಿ ಕಾಲ್ಬೆರಳಿನ ಮೂಳೆ ಮುರಿತಕ್ಕೊಳಗಾದ ವಿಕೆಟ್​ ಕೀಪರ್​-ಬ್ಯಾಟರ್​ ರಿಷಭ್​ ಪಂತ್​ ನವೆಂಬರ್​ನಲ್ಲಿ ಪ್ರವಾಸಿ ದಣ ಆಫ್ರಿಕಾ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್​ ಸರಣಿಗೆ ಫಿಟ್​ ಆಗುವ ವಿಶ್ವಾಸವನ್ನು ಅಗರ್ಕರ್​ ವ್ಯಕ್ತಪಡಿಸಿದರು. ಆಗ ಪಂತ್​ಗೆ ಉಪನಾಯಕನ ಪಟ್ಟವನ್ನೂ ಮರಳಿ ನೀಡಲಾಗುವುದು. ಜಡೇಜಾ ತಂಡದ ಅನುಭವಿ ಆಟಗಾರ ಆಗಿರುವುದರಿಂದ ವಿಂಡೀಸ್​ ಸರಣಿಗೆ ಹಂಗಾಮಿ ಉಪನಾಯಕರಾಗಿದ್ದಾರೆ ಎಂದು ಅಗರ್ಕರ್​ ವಿವರಿಸಿದರು. ಈ ಹಿಂದೆ ಏಕದಿನ, ಟಿ20 ತಂಡಗಳ ಉಪನಾಯಕರಾಗಿದ್ದ 36 ವರ್ಷದ ಜಡೇಜಾಗೆ ಟೆಸ್ಟ್​ ತಂಡದಲ್ಲಿ ಈ ಜವಾಬ್ದಾರಿ ಲಭಿಸಿರುವುದು ಇದೇ ಮೊದಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net