ಮದುವೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ವರನ ಜತೆ ಓಡಿಹೋದ ವಧುವಿನ ತಾಯಿ! Bride Mother Elope

Bride Mother Elope
Published on

Bride Mother Elope : ಮದುವೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ವಧುವಿನ ತಾಯಿಯೊಂದಿಗೆ ವರ ಓಡಿಹೋದ ವಿಚಿತ್ರ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಈ ವಿಚಾರ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸ್ಥಳೀಯರ ಮಾಹಿತಿ ಪ್ರಕಾರ, ಓಡಿ ಹೋದ ವರ, ತನ್ನ ಭಾವಿ ಅತ್ತೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಯಾರಿಗೂ ಅವರಿಬ್ಬರ ಸಂಬಂಧದ ಬಗ್ಗೆ ತಿಳಿದಿರಲಿಲ್ಲ. ವರನೊಂದಿಗೆ ಪರಾರಿಯಾಗುವಾಗ ವಧುವಿನ ತಾಯಿ, ಮಗಳ ಆಭರಣಗಳು ಮತ್ತು ಮದುವೆಗಾಗಿ ಉಳಿಸಿದ್ದ ಹಣವನ್ನೂ ತೆಗೆದುಕೊಂಡು ಹೋಗಿದ್ದಾಳೆ.

ಸಂಬಂಧಿಕರು ಹೇಳುವಂತೆ, ಓಡಿಹೋದ ಮಹಿಳೆ, ಯುವಕನೊಂದಿಗೆ ತನ್ನ ಮಗಳ ಮದುವೆಯನ್ನು ಮಾಡಿಸಲು ಮುಂದಾಗಿದ್ದಳು. ಮದುವೆಯ ಸಿದ್ಧತೆಗಳ ನೆಪದಲ್ಲಿ ಬಾಯ್​ಫ್ರೆಂಡ್​ ಸಾಂದರ್ಭಿಕವಾಗಿ ಮನೆಗೆ ಬರುತ್ತಿದ್ದ. ಆದರೆ, ಯಾರಿಗೂ ಇಬ್ಬರ ಬಗ್ಗೆ ಯಾವುದೇ ಅನುಮಾನ ಬರಲಿಲ್ಲ.

ಕುಟುಂಬಕ್ಕೆ ತಿಳಿಯದಂತೆ, ಆ ಯುವಕ ಮತ್ತು ಭಾವಿ ಅತ್ತೆಯ ನಡುವೆ ಪ್ರಣಯ ಸಂಬಂಧವೂ ಬೆಳೆಯಿತು. ಇದರ ನಡುವೆ ವರನು ತನ್ನ ಭಾವಿ ಅತ್ತೆಗೆ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದನು. ಆದರೆ, ತಾಯಿ ಮತ್ತು ಮಗನ ನಡುವೆ ಇರುವ ಬಾಂದವ್ಯ ಅಂತ ಎಲ್ಲರೂ ಭಾವಿಸಿದ್ದರು. ಆದರೆ, ಅವರಿಬ್ಬರ ನಡುವೆ ಯಾರೂ ಊಹಿಸದ ಸಂಬಂಧವಿತ್ತು.

ಈ ತಿಂಗಳ 16ರಂದು ತನ್ನ ಮಗಳ ಜತೆ ವಿವಾಹ ನಡೆಯಬೇಕಿತ್ತು. ಮದುವೆಗೆ ಎಲ್ಲರನ್ನೂ ಆಹ್ವಾನಿಸಲಾಗಿತ್ತು. ಶಾಪಿಂಗ್‌ಗೆ ಹೋಗುವುದಾಗಿ ಹೇಳಿ ಇಬ್ಬರೂ ಮನೆಯಿಂದ ಹೊರಟರು. ಇದಾದ ನಂತರ, ಅವರಿಬ್ಬರು ಮನೆಗೆ ವಾಪಸ್​ ಬರಲೇ ಇಲ್ಲ. ಅವರ ಬಗ್ಗೆ ಯಾವುದೇ ಸುದ್ದಿಯೂ ಸಿಗಲಿಲ್ಲ. ಇಬ್ಬರನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅದು ಕೂಡ ಪ್ರಯೋಜನವಾಗಲಿಲ್ಲ.

ಅನುಮಾನಗೊಂಡ ಹುಡುಗಿಯ ತಂದೆ, ಬೀರು ಪರಿಶೀಲಿಸಿದಾಗ ಚಿನ್ನ ಮತ್ತು ಹಣ ಕಾಣೆಯಾಗಿರುವುದು ಕಂಡುಬಂದಿದೆ. ಅಲ್ಲಿಗೆ ಇಬ್ಬರು ಓಡಿ ಹೋಗಿದ್ದಾರೆಂಬುದು ಖಚಿತವಾಯಿತು. ಸದ್ಯ ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net