

ಬೆಂಗಳೂರು: ಹಿರಿಯ ಪತ್ರಕರ್ತ ಐ.ಎಚ್. ಸಂಗಮದೇವ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಸಂಜಯನಗರದ ಮಂಗಳ ಎಂಬವರಿಗೆ ನಗರದ 8ನೇ ಎಸಿಎಂಎಂ ನ್ಯಾಯಾಲಯ ಇಂದು(ಅ.18) ಜೈಲು( Prison) ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಪ್ರಕರಣ ಏನು?
ಸದರಿ ಮಂಗಳ ಅವರು 2016ರಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿ ತಮ್ಮ ಕುಟುಂಬದ ಒಡೆತನದಲ್ಲಿರುವ ಫ್ಲ್ಯಾಟ್ ಒಂದನ್ನು ಐವತ್ತೈದು ಲಕ್ಷ ರೂ.ಗೆ ನೀಡುವುದಾಗಿ ನಂಬಿಸಿ, ಆ ಪೈಕಿ ಮುಂಗಡವಾಗಿ ಮೂವತ್ತು ಲಕ್ಷ ರೂಪಾಯಿಯನ್ನು ಸಂಗಮದೇವ್ ಅವರಿಂದ ಪಡೆದುಕೊಂಡಿದ್ದರು. ಆದರೆ, ಆ ಫ್ಲ್ಯಾಟಿಗೆ ಸಂಬಂಧಪಟ್ಟಂತೆ ಮಂಗಳ ಅವರ ಕುಟುಂಬದಲ್ಲಿ ವ್ಯಾಜ್ಯಗಳಿದ್ದು, ಇದರ ಬಗ್ಗೆ ಗೊತ್ತಾಗಿ ತಾವು ಕೊಟ್ಟ ಹಣ ವಾಪಸ್ ಮಾಡುವಂತೆ ಸಂಗಮದೇವ್ ಅವರು ಒತ್ತಾಯಿಸಿದಾಗ ಹಣ ವಾಪಸ್ ಮಾಡಲು ವರ್ಷಾನುಗಟ್ಟಲೆ ಸತಾಯಿಸಿದ್ದಲ್ಲದೆ ಕೊಲೆ ಬೆದರಿಕೆಯನ್ನೂ ಒಡ್ಡಿದ್ದರು.
3 ತಿಂಗಳು ಜೈಲು ಶಿಕ್ಷೆ
ಈ ಸಂಬಂಧ 2022ರಲ್ಲಿ ಸಂಜಯನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ಮಂಗಳಾಗೆ ಮೂರು ತಿಂಗಳ ಸಾದಾ ಸಜೆ ಹಾಗೂ ದಂಡ ಎರಡನ್ನೂ ವಿಧಿಸಿದೆ. ಒಂದು ವೇಳೆ ದಂಡ ತೆರಲು ವಿಫಲವಾದಲ್ಲಿ ಮತ್ತೆ 7 ದಿನಗಳು ಸಜಾ ಆಗಲಿದೆ. ಪ್ರಾಸಿಕ್ಯೂಷನ್ ಪರವಾಗಿ ಎಪಿಪಿ ವಿಶ್ವನಾಥ್ ಅವರು ವಾದ ಮಂಡಿಸಿದ್ದರು.