

ಬೆಂಗಳೂರು: ಸೈಬರ್ ಅಪರಾಧ ಪ್ರಕರಣಗಳ ಪಟ್ಟಿಯಲ್ಲಿ ದೇಶದಲ್ಲೇ ಕರ್ನಾಟಕ ಅಗ್ರಸ್ಥಾನದಲ್ಲಿದ್ದು, ಸೈಬರ್ ಕಳ್ಳರು ರಾಜಧಾನಿ ಬೆಂಗಳೂರನ್ನೇ ಕೇಂದ್ರ ಸ್ಥಾನವನ್ನಾಗಿಸಿಕೊಂಡು ಕೃತ್ಯವೆಸಗುತ್ತಿರುವುದು ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಏತನ್ಮಧ್ಯೆ ಸೈಬರ್ ಅಪರಾಧ ನಿಯಂತ್ರಣಕ್ಕಾಗಿ ರಾಜ್ಯಮಟ್ಟದಲ್ಲಿ ‘ನಾಗರಿಕ ಸುರಕ್ಷತೆ’ಯ ಬಗ್ಗೆ ಜಾಗೃತಿ ಮೂಡಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ನ್ಯಾಷನಲ್ ಕ್ರೖೆಂ ರೆಕಾರ್ಡ್ಸ್ ಬ್ಯೂರೋ (ಎನ್ಸಿಆರ್ಬಿ) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 21,889 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುವ ಮೂಲಕ ಕರ್ನಾಟಕ ಟಾಪ್ 1ರಲ್ಲಿದೆ. 18,236 ಪ್ರಕರಣ ವರದಿಯಾಗಿರುವ ತೆಲಂಗಾಣ 2ನೇ ಸ್ಥಾನದಲ್ಲಿದ್ದರೆ, 10,794 ಕೇಸ್ಗಳು ದಾಖಲಾಗಿರುವ ಉತ್ತರಪ್ರದೇಶ ತೃತೀಯ ಸ್ಥಾನದಲ್ಲಿದೆ. ದೇಶದಲ್ಲಿ ಸೈಬರ್ ಅಪರಾಧ ತಡೆಗೆ ವ್ಯಾಪಕ ಜನಜಾಗೃತಿಯೊಂದೇ ಮಾರ್ಗವಾಗಿದ್ದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ 2025ರ ಜು.28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಅಮಿತ್ ಷಾ ಪತ್ರ ಬರೆದಿದ್ದಾರೆ. ಆನ್ಲೈನ್ ಹಣಕಾಸು ವಂಚನೆ ಹಾಗೂ ಇತರ ಸೈಬರ್ ಅಪರಾಧ ಪ್ರಕರಣಗಳನ್ನು ತಕ್ಷಣವೇ ವರದಿ ಮಾಡಲು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (www.cybercrime.gov.in) ಹಾಗೂ ರಾಷ್ಟ್ರೀಯ ಸೈಬರ್ ಸಹಾಯವಾಣಿ ಸಂಖ್ಯೆ 1930 ಆರಂಭಿಸಲಾಗಿದೆ. ಆದಾಗ್ಯೂ ಸೈಬರ್ ಅಪರಾಧ ಹಾಗೂ ದೂರು ಸಲ್ಲಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಕೊರತೆ ಇದ್ದು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೈಬರ್ ಜಾಗೃತಿಗಾಗಿ ಮಾರ್ಗಸೂಚಿ ಪ್ರಕಟಿಸಿರುವ ಕೇಂದ್ರ ಗೃಹ ಸಚಿವಾಲಯ, ಇದನ್ನು ಪಾಲಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
ಈ ಹಿನ್ನೆಲೆಯಲ್ಲಿ ಆಯಾ ಠಾಣಾ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ತಕ್ಷಣದಿಂದಲೇ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒಳಾಡಳಿತ ಇಲಾಖೆ ಸೂಚಿಸಿದ್ದು, ಇನ್ನು ಮುಂದೆ ರಾಜ್ಯ ಸರ್ಕಾರದ ಎಲ್ಲ ಯೋಜನೆಗಳ ಜಾಹೀರಾತುಗಳು ಮತ್ತು ಯುಟಿಲಿಟಿ ಬಿಲ್ಗಳಲ್ಲಿ ಸೈಬರ್ ಅಪರಾಧ ಸಂಬಂಧಿತ ಸಹಾಯವಾಣಿ ಮತ್ತು ಪೋರ್ಟಲ್ ಮಾಹಿತಿಯನ್ನು ಕಡ್ಡಾಯವಾಗಿ ಸೇರಿಸುವಂತೆ ಅ.13ರಂದು ಸೈಬರ್ ಡಿಜಿಪಿ ಲಿಖಿತ ಆದೇಶ ಹೊರಡಿಸಿದ್ದಾರೆ.
ಸೈಬರ್ ಜಾಗೃತಿಗಾಗಿ ಗೃಹ ಸಚಿವಾಲಯದ ಅಧಿಕೃತ ಸಾಮಾಜಿಕ ಮಾಧ್ಯಮ ‘ಸೈಬರ್ ದೋಸ್ತ್’ ಅಭಿವೃದ್ಧಿಪಡಿಸಿದೆ. ಇದರಲ್ಲಿ ಸೈಬರ್ ಅಪರಾಧವೆಸಗಲು ಆರೋಪಿಗಳು ಅನುಸರಿಸುವ ತಂತ್ರಗಾರಿಕೆ ಮತ್ತು ನಿಯಂತ್ರಣದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಹೀಗಾಗಿ ಸೈಬರ್ ದೋಸ್ತ್ ಖಾತೆಯನ್ನು ಫಾಲೋ ಮಾಡಲು ಸಾರ್ವಜನಿಕರಿಗೆ ತಿಳಿಸುವಂತೆ ಪೊಲೀಸರಿಗೆ ಸೂಚನೆ ಕೊಡಲಾಗಿದೆ.
ಉತ್ತರ ಭಾರತದ ಯಾವುದೋ ಜಿಲ್ಲೆ ಹಾಗೂ ವಿದೇಶದಲ್ಲಿ ಕುಳಿತು ಸೈಬರ್ ಗಾಳ ಹಾಕುತ್ತಾರೆ ಎಂದು ಈವರೆಗೆ ತಿಳಿಯಲಾಗಿತ್ತು. ಆದರೆ, ಬೆಂಗಳೂರಲ್ಲೇ ಕುಳಿತು ವಿದೇಶದಲ್ಲಿರುವವರ ಹಣ ಲಪಟಾಯಿಸುತ್ತಿರುವ ಎರಡು ಪ್ರಕರಣ ಗಳು ಬೆಳಕಿಗೆ ಬಂದಿವೆ. ಎಚ್ಎಸ್ಆರ್ ಲೇಔಟ್ನಲ್ಲಿ ಸೈಬರ್ ಕ್ರೖೆಂ ಜಾಲದ ಕಾಲ್ಸೆಂಟರ್ ತೆರೆದು ಅಮೆರಿಕನ್ನರನ್ನು ವಂಚನೆಯ ಬಲೆಗೆ ಬೀಳಿಸುತ್ತಿದ್ದ ಪ್ರಕರಣ ಒಂದಾದರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸೈಬರ್ ವಂಚನೆಯ ಇನ್ನೊಂದು ಪ್ರಕರಣವನ್ನು ಸಿಬಿಐ ಪತ್ತೆಹಚ್ಚಿದೆ.
ಡಿಜಿಟಲ್ ಸೇವೆಗಳ ಬಳಕೆ ಹೆಚ್ಚಿದಂತೆ ಆನ್ಲೈನ್ ವಂಚನೆ, ಗುರುತಿನ ಕಳ್ಳತನ, ಹಣಕಾಸು ಹಗರಣ, ಡಿಜಿಟಲ್ ಅರೆಸ್ಟ್ ಮುಂತಾದ ಸೈಬರ್ ಅಪರಾಧಗಳು ಹೆಚ್ಚುತ್ತಲೇ ಇವೆ. ಇದು ಸಮಾಜದ ಪ್ರತಿಯೊಂದು ವರ್ಗದ ಮೇಲೆ ವಿಶೇಷವಾಗಿ ಅದರ ಬಗ್ಗೆ ತಿಳಿದಿಲ್ಲದ ನಾಗರಿಕರ ಮೇಲೆ ಪರಿಣಾಮ ಬೀರುತ್ತಿದೆ. ಈ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಆದಾಗ್ಯೂ ವಂಚನೆ ನಿಲ್ಲುತ್ತಿಲ್ಲ. ವ್ಯಾಪಕ ಸಾರ್ವಜನಿಕ ಜಾಗೃತಿ ಮೂಡಿಸಬೇಕಿದೆ. ದೇಶದಾದ್ಯಂತ ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಸಹಕಾರವು ಅತ್ಯಂತ ಅಗತ್ಯವಾಗಿದೆ. ಹೀಗಾಗಿ ರಾಜ್ಯ ಮಟ್ಟದಲ್ಲಿ ನಿಮ್ಮ ಸಹಕಾರದೊಂದಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಅಮಿತ್ ಶಾ ಉಲ್ಲೇಖಿಸಿದ್ದಾರೆ.