ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ತಯಾರಿ; ಐದು ಗ್ಯಾರಂಟಿಗಳನ್ನು ಘೋಷಿಸಿದ ರಾಹುಲ್​ ಗಾಂಧಿ

Rahul Gandhi
Published on

ನವದೆಹಲಿ: ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶುರುವಾದ ಗ್ಯಾರಂಟಿ ಯೋಜನೆಗಳ ಅಲೆ ಇದೀಗ ಲೋಕ ಸಮರಕ್ಕೂ ವ್ಯಾಪಿಸಿದ್ದು, ಪ್ರಧಾನಿ ಮೋದಿ ಅವರ ಗ್ಯಾರಂಟಿಗೆ ಪ್ರತಿಯಾಗಿ ಕಾಂಗ್ರೆಸ್​ ಐದು ಯೋಜನೆಗಳನ್ನು ಘೋಷಿಸುವ ಮೂಲಕ ಟಕ್ಕರ್​ ನೀಡುವ ಪ್ರಯತ್ನ ಮಾಡಿದೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ದೇಶದ ಯುವಕರನ್ನು ಗಮನದಲ್ಲಿಟ್ಟುಕೊಂಡು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾರೆ. ಖಾಲಿ ಉಳಿದಿರುವ 30 ಲಕ್ಷ ಸರ್ಕಾರಿ ನೌಕರಿಯನ್ನು ಅಧಿಕಾರಕ್ಕೆ ಬಂದ ಬಳಿಕ ಭರ್ತಿ ಮಾಡುವುದಾಗಿ ತಿಳಿಸಿದ್ದಾರೆ.

ರಾಜಸ್ಥಾನದ ಬನ್ಸಾರ್‌ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ರಾಹುಲ್ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಐದು ಗ್ಯಾರಂಟಿಯಲ್ಲಿ ಮೊದಲನೆಯ ಗ್ಯಾರಂಟಿ ಉದ್ಯೋಗವಾಗಿದೆ. ಪದವಿ ಮತ್ತು ಡಿಪ್ಲೋಮಾ ಪಡೆದ 25 ವರ್ಷಕ್ಕಿಂತ ಕೆಳವಯಸ್ಸಿನ ಯುವಕರಿಗೆ ಉದ್ಯೋಗದ ಭರವಸೆಯನ್ನು ನೀಡುವುದು ಮೊದಲ ಗ್ಯಾರಂಟಿ ಆಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಮತ್ತು ಖಾಸಗಿ ಕಂಪನಿಗಳಲ್ಲಿ ಪದವಿ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಅಪ್ರೆಂಟಿನ್‌ಶಿಪ್ ನೀಡಲಾಗುತ್ತದೆ. ಇದನ್ನು, ಮನರೇಗಾ ರೀತಿಯಲ್ಲೇ ಕಾನೂನಾಗಿ ಮಾಡಲಾಗುತ್ತದೆ. ಒಂದು ವರ್ಷದ ತರಬೇತಿ ಅವಧಿಯಲ್ಲಿ ವಾರ್ಷಿಕ ಒಂದು ಲಕ್ಷ ರೂ. ಭತ್ಯೆ ನೀಡಲಾಗುತ್ತದೆ. ದೇಶದಲ್ಲಿರುವ ಎಲ್ಲ ಯುವಕರಿಗೆ ಅಪ್ರೆಂಟಿನ್‌ಶಿಪ್ ಅವಕಾಶವನ್ನು ಕಾಂಗ್ರೆಸ್ ನೀಡಲಿದೆ.

ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ, ಗುತ್ತಿಗೆ ಕೆಲಸಗಾರರಿಗೆ (ಗಿಗ್ ವರ್ಕರ್ಸ್) ಸಾಮಾಜಿಕ ಭದ್ರತೆ, ಖಾಲಿ ಇರುವ 30 ಲಕ್ಷ ಸರ್ಕಾರಿ ನೌಕರಿಗಳ ನೇಮಕಾತಿ, ಸರ್ಕಾರಿ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಸೋರಿಕೆ ತಡೆಯಲು ಕಠಿಣ ಕಾನೂನು, ಸ್ಟಾರ್ಟಪ್​ಗಳಿಗೆ 5,000 ಕೋಟಿ ರೂ ಫಂಡ್ ನಿಯೋಜನೆ ಎಂದು ಕಾಂಗ್ರೆಸ್​ ಪಕ್ಷ ಲೋಕ ಸಮರಕ್ಕೂ ಮುನ್ನ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net