ಕಡಬ: ಕಾಣಿಯೂರು ಗ್ರಾಮ ಪಂಚಾಯಿತಿ ಸಾಮಾನ್ಯಸಭೆ ಅಧ್ಯಕ್ಷ ವಿಶ್ವನಾಥ ಕೊಪ್ಪ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ವಿಷಯ ಪ್ರಸ್ತಾಪಿಸಿದ ಸದಸ್ಯ ಲೋಕಯ್ಯ ಪರವ, ದೋಳ್ಪಾಡಿಯಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಕಳಪೆಮಟ್ಟದಾಗಿದ್ದು, ಸಮರ್ಪಕವಾಗಿ ಕೆಲಸ ನಡೆಯುತ್ತಿಲ್ಲ. ಯೋಜನೆ ಸೌಲಭ್ಯ ಪ್ರತಿ ಮನೆಗೂ ತಲುಪಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು ಎಂದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ದೋಳ್ಪಾಡಿಯಲ್ಲಿ ಬಿಎಸ್‌ಎನ್‌ಎಲ್ ಟವರ್ ಸಮರ್ಪಕವಾಗಿ ಸಿಗ್ನಲ್ ಲಭ್ಯವಿಲ್ಲದ ಕಾರಣ ಅಧಿಕಾರಿಗಳ ಸಭೆ ಕರೆಯಲು ಸದಸ್ಯ ಲೋಕಯ್ಯ ಕೋರಿದರು. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಲು ತೀರ್ಮಾನಿಸಲಾಯಿತು. ಕೂಡುರಸ್ತೆ ಎಂಬಲ್ಲಿ ದಾರಿದೀಪಕ್ಕೆ ವಿದ್ಯುತ್ ಮೀಟರ್ ಅಳವಡಿಸುವಂತೆ ಮೆಸ್ಕಾಂಗೆ ಬರೆಯಲು ಸದಸ್ಯ ರಾಮಣ್ಣ ಗೌಡ ಮುಗರಂಜ ಒತ್ತಾಯಿಸಿದರು. ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದ ಬಳಿ ದಾರಿದೀಪ ಅಳವಡಿಸುವಂತೆ ಸದಸ್ಯ ವಸಂತ ಪೆರ್ಲೋಡಿ, ಕೊಪ್ಪ ಎಂಬಲ್ಲಿ ದಾರಿ ದೀಪ ಅಳವಡಿಸುವಂತೆ ಅಧ್ಯಕ್ಷ ವಿಶ್ವನಾಥ ಕೊಪ್ಪ, ಕೂಡಿಗೆ ಎಂಬಲ್ಲಿ ದಾರಿದೀಪ ಅಳವಡಿಸುವಂತೆ ಸದಸ್ಯ ತಾರಾನಾಥ ಇಡ್ಯಡ್ಕ ಸೂಚಿಸಿದರು.
ಗ್ರಾಮ ಪಂಚಾಯಿತಿ ನೀರು ಸರಬರಾಜು ಮತ್ತು ಬೀದಿದೀಪ ಸ್ಥಾವರಗಳ ಡಿಸೆಂಬರ್ 2024ರ ಅಂತ್ಯಕ್ಕೆ ಇರುವ ವಿದ್ಯುತ್ ಬಿಲ್ ಬಾಕಿ ಮೊತ್ತ ಪಾವತಿಸದೆ ಇರುವ ಸ್ಥಾವರಗಳ ವಿದ್ಯುತ್ ನಿಲುಗಡೆ ಬಗ್ಗೆ ಪಂಚಾಯಿತಿಗೆ ಬಂದ ಸುತ್ತೋಲೆಯನ್ನು ಸಭೆಯ ಗಮನಕ್ಕೆ ತರಲಾಯಿತು.
ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸದಸ್ಯರಾದ ಗಣೇಶ್ ಉದನಡ್ಕ, ರಾಮಣ್ಣ ಗೌಡ ಮುಗರಂಜ, ತಾರಾನಾಥ ಇಡ್ಯಡ್ಕ, ದೇವಿಪ್ರಸಾದ್ ದೋಳ್ಪಾಡಿ, ಲೋಕಯ್ಯ ಪರವ ದೋಳ್ಪಾಡಿ, ಪ್ರವೀಣ್‌ಚಂದ್ರ ರೈ ಕುಮೇರು, ವಸಂತ ಪೆರ್ಲೋಡಿ, ಸುಲೋಚನಾ ಮಿಯೋಳ್ಪೆ, ತೇಜಕುಮಾರಿ ಉದ್ಲಡ್ಡ, ಲಲಿತಾ ದರ್ಖಾಸು, ಮೀರಾ ಕಳೆಂಜೋಡಿ, ಸುನಂದ ಅಬ್ಬಡ, ಕೀರ್ತಿಕುಮಾರಿ ಅಂಬುಲ ಉಪಸ್ಥಿತರಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಘು ಎನ್.ಬಿ. ಸಭೆ ನಿರ್ವಹಿಸಿದರು. ಸಿಬ್ಬಂದಿ ತಿಮ್ಮಪ್ಪ ಗೌಡ ಬೀರುಕುಡಿಕೆ ಇಲಾಖೆಯ ಸುತ್ತೋಲೆ, ಸಾರ್ವಜನಿಕ ಅರ್ಜಿ ಓದಿದರು. ಪಂಚಾಯತಿ ಸಿಬ್ಬಂದಿ ಚಿತ್ರಾ, ಕುಮಾರ್, ಶಶಿಕಲಾ, ರಕ್ಷಿತ್, ಪಾರ್ವತಿ, ಧನಂಜಯ್ ಸಹಕರಿಸಿದರು.