

ನವದೆಹಲಿ: ಮಹಿಳಾ ಮತ್ತು ಒಂಟಿ ಪುರುಷ ಸರ್ಕಾರಿ ನೌಕರರು ತಮ್ಮ ಪೂರ್ಣ ಸೇವೆಯ ಅವಧಿಯಲ್ಲಿ 730 ದಿನಗಳು ಮಕ್ಕಳ ಆರೈಕೆ ರಜೆಯನ್ನು ಪಡೆದುಕೊಳ್ಳಬಹುದು. ಇದಕ್ಕೆ ಅವರು ಅರ್ಹರಾಗಿದ್ದಾರೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವರಾದ ಜಿತೇಂದ್ರ ಸಿಂಗ್ ಇಂದು ಹೇಳಿದ್ದಾರೆ.
"ಕೇಂದ್ರೀಯ ನಾಗರಿಕ ಸೇವೆಗಳ ನಿಯಮಗಳು, 1972ರ ನಿಯಮ 43-ಸಿ ಅಡಿಯಲ್ಲಿ ಸಿವಿಲ್ ಸೇವೆಗಳು ಮತ್ತು ಹುದ್ದೆಗಳಿಗೆ ನೇಮಕಗೊಂಡ ಮಹಿಳಾ ಸರ್ಕಾರಿ ನೌಕರರು ಮತ್ತು ಒಂಟಿ ಪುರುಷ ಸರ್ಕಾರಿ ನೌಕರರು ಮಕ್ಕಳ ಆರೈಕೆ ರಜೆಗೆ (CCL) ಅರ್ಹರಾಗಿರುತ್ತಾರೆ. ಈ ಸರ್ಕಾರಿ ನೌಕರರು, ತಮ್ಮ ಪೂರ್ಣ ಸೇವೆಯ ಅವಧಿಯಲ್ಲಿ 730 ದಿನಗಳ ಕಾಲ ಮಕ್ಕಳನ್ನು ಆರೈಕೆ ಮಾಡಲು ರಜೆ ತೆಗೆದುಕೊಳ್ಳಬಹುದು" ಎಂದು ಹೇಳಿದರು.
ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು 18 ವರ್ಷ ವಯಸ್ಸಿನವರೆಗೆ ನೋಡಿಕೊಳ್ಳಲು ರಜೆಯನ್ನು ಪಡೆಯಬಹುದು ಮತ್ತು ಅಂಗವಿಕಲ ಮಕ್ಕಳ ವಿಷಯದಲ್ಲಿ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂದು ಲಿಖಿತ ರೂಪದಲ್ಲಿ ಜಿತೇಂದ್ರ ಸಿಂಗ್ ಸಂಸತ್ತಿಗೆ ತಿಳಿಸಿದ್ದಾರೆ,(ಏಜೆನ್ಸೀಸ್).