

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಪರಿಶುದ್ಧ ಮನಸ್ಸಿನಿಂದ, ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡಿದಾಗ ಸಕಲ ಪಾಪಕರ್ಮಗಳು ನಿವಾರಣೆಯಾಗಿ ಪುಣ್ಯ ಸಂಚಯವಾಗುತ್ತದೆ. ಮೋಕ್ಷ ಪ್ರಾಪ್ತಿಯೂ ಆಗುತ್ತದೆ ಎಂದು ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷೆ ಧರ್ಮಸ್ಥಳದ ಅನಿತಾ ಸುರೇಂದ್ರ ಕುಮಾರ್ ಹೇಳಿದರು.
ಬೆಳ್ತಂಗಡಿ ಜೈನ್ಮಿಲನ್ ಆಶ್ರಯದಲ್ಲಿ ಮಂಗಳೂರು ವಿಭಾಗಮಟ್ಟದ ಜಿನಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಜನೆಯನ್ನು ಎಲ್ಲಿ ಬೇಕಾದರೂ ಹಾಡಬಹುದು. ಭಜನೆಯಿಂದ ನಮ್ಮ ವರ್ತನೆಯಲ್ಲಿ ಪರಿವರ್ತನೆಯಾಗಿ ಶಿಸ್ತುಬದ್ಧ ಜೀವನ ರೂಢಿಯಾಗುತ್ತದೆ. ಮಕ್ಕಳಿಗೂ ಭಜನಾ ಸಂಸ್ಕೃತಿಯನ್ನು ಕಲಿಸಬೇಕು ಎಂದರು. ಭಜನಾ ಸ್ಪರ್ಧೆಗೆ ಉತ್ತಮ ಸಹಕಾರ ನೀಡಿದ ಮಂಗಳೂರು ವಿಭಾಗದ ಎಲ್ಲ ಕಾರ್ಯಕರ್ತರನ್ನು ಅಭಿನಂದಿಸಿದರು.
ಜಿನಭಜನೆ ಸ್ಪರ್ಧೆಯ ಸಂಯೋಜಕಿ ಉಜಿರೆಯ ಸೋನಿಯಾ ಯಶೋವರ್ಮ ಮಾತನಾಡಿ, ಭಜನೆ ಇದ್ದಲ್ಲಿ ವಿಭಜನೆ ಇರುವುದಿಲ್ಲ. ಮನಸ್ಸು ಹಗುರವಾಗುತ್ತದೆ. ರೋಗನಿರೋಧಕ ಶಕ್ತಿ ವೃದ್ಧಿಸಿ ನವಚೈತನ್ಯ ಮೂಡಿ ಬರುತ್ತದೆ ಎಂದರು.
ಮೈಸೂರಿನ ಯುವರಾಜ ಭಂಡಾರಿ, ಮಂಗಳೂರಿನ ಪುಷ್ಪರಾಜ ಜೈನ್, ರತ್ನಾಕರ ಜೈನ್, ಮೂಡುಬಿದಿರೆಯ ಯುವರಾಜ ಜೈನ್, ಪ್ರೊ.ತ್ರಿಶಲಾ ಉದಯಕುಮಾರ್ ಮಲ್ಲ, ಸುದರ್ಶನ ಜೈನ್ ಬಂಟ್ವಾಳ, ರಜತ ಪಿ.ಶೆಟ್ಟಿ ಮತ್ತು ಉಜಿರೆಯ ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು. ಬೆಳ್ತಂಗಡಿ ಜೈನ್ಮಿಲನ್ ಅಧ್ಯಕ್ಷ ಡಾ.ನವೀನ್ ಕುಮಾರ್ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ಸಂಪತ್ ಕುಮಾರ್ ವಂದಿಸಿದರು. ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಉಪನ್ಯಾಸಕ ಪ್ರೊ.ಸುವೀರ್ ಜೈನ್ ನಿರೂಪಿಸಿದರು.
ಫಲಿತಾಂಶ
ಹಿರಿಯರ ವಿಭಾಗದಲ್ಲಿ ಬ್ರಾಹ್ಮಿ ತಂಡ, ಮೂಡುಬಿದಿರೆ(ಪ್ರಥಮ), ಪರುಷಶ್ರೀ ತಂಡ, ಪರುಷಗುಡ್ಡೆ, ಕುತ್ಲೂರು (ದ್ವಿತೀಯ), ವಿದುಷ್ ತಂಡ, ಉಜಿರೆ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ. ಕಿರಿಯರ ವಿಭಾಗದಲ್ಲಿ ಸಮ್ಯಕ್ತ ತಂಡ, ಬಂಟ್ವಾಳ (ಪ್ರಥಮ), ಕನಕಮಂಜರಿ ತಂಡ, ಹೊಸ್ಮಾರು (ದ್ವಿತೀಯ) ಚಾರುಶ್ರೀ ತಂಡ, ಮೂಡುಬಿದಿರೆ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ. 54 ವರ್ಷ ಮೇಲ್ಪಟ್ಟವರಿಗೆ ಸ್ಪರ್ಧೆ (ಸುವರ್ಣ ತಂಡ) ಧವಳತಂಡ, ಮೂಡುಬಿದಿರೆ ವಿಜೇತರಾಗಿದ್ದಾರೆ.