

ಮಂಗಳೂರು : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸುಲ್ಕೇರಿ ಗ್ರಾಮದ ನಾಯಿದಗುರಿಯ ಮಲೆಕುಡಿಯ ಸಮುದಾಯದ 33 ನಿರಾಶ್ರಿತ ಕುಟುಂಬಗಳಿಗೆ ಪುನರ್ವಸತಿಗೆ ಮೀಸಲಿಟ್ಟ ಜಾಗವನ್ನು ಗಡಿ ಗುರುತು ಮಾಡಿ ಐಟಿಡಿಪಿ ಇಲಾಖೆಗೆ
ಹಸ್ತಾಂತರಿಸಬೇಕು. ನಾಯಿದ ಗುರಿಯಲ್ಲಿ ವಾಸವಾಗಿರುವ ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳಿಗೆ ಹಕ್ಕು ಪತ್ರವನ್ನು ಜಿಲ್ಲಾಡಳಿತ ವಿತರಿಸಬೇಕು. ಒಂದು ತಿಂಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮ ವಹಿಸಿದ್ದರೆ ಜಿಲ್ಲಾಧಿಕಾರಿ ಕಚೇರಿ ಬಳಿ ಆಹೋರಾತ್ರಿ ಧರಣಿ ನಡೆಸಲು ರಾಜ್ಯ ಮಲೆಕುಡಿಯರ ಸಂಘ ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ಶ್ರೀಧರ ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರೀಯ ಉದ್ಯಾನವನದ ಸಮಸ್ಯೆಯ ಮಧ್ಯೆ ಕಸ್ತೂರಿನ ರಂಗನ್ ವರದಿಯ ಆತಂಕ, ನಕ್ಸಲ್ ಸಮಸ್ಯೆ ಕೂಡಾ ಮಲೆಕುಡಿಯ ಸಮುದಾಯವವನ್ನು ಕಾಡುತ್ತಿದೆ. ಅನೇಕ ಕಾನೂನಾತ್ಮಕ ಸಮಸ್ಯೆಗಳನ್ನು ಮಲೆಕುಡಿಯ ಸಮುದಾಯ ಎದುರಿಸುತ್ತಾ ಬಂದಿದೆ ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸಭೆ ಕರೆದು ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.
2011ರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಿರಾಶ್ರಿತ ಕುಟುಂಬಗಳು ಸುಲ್ಕೇರಿ ಗ್ರಾಮದ ಸ. ನಂ 65/1ಪಿ1ರ ಸರ್ಕಾರಿ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದ ಸಂದರ್ಭ ಆಡಳಿತ ವ್ಯವಸ್ಥೆ ಅವರ ಮೇಲೆ ದೌರ್ಜನ್ಯ ಎಸಗಿತ್ತು. ಅನೇಕ ಹೋರಾಟಗಳ ಬಳಿಕ ಜಿಲ್ಲಾಡಳಿತ 190 ಎಕರೆ ಜಮೀನನ್ನು ಗಿರಿಜನ ಪುನರ್ವಸತಿಗೆ ಮೀಸಲಿಟ್ಟು ಆದೇಶ ಮಾಡಿತ್ತು. ಈ ಸಂದರ್ಭ ಕೆಲವು ಪ್ರಭಾವಿ ವ್ಯಕ್ತಿಗಳು ಐದು ಕುಟುಂಬಗಳು ವಾಸವಾಗಿದ್ದ ಜಮೀನನ್ನು ಬೆಳ್ತಂಗಡಿ ತಾ.ಪಂ.ಗೆ ಸಾರ್ವಜನಿಕ ಉದ್ದೇಶಕ್ಕೆ 15 ವರ್ಷ ಪರಭಾರೆ ನಿಷೇಧ ಮಾಡಬಾರದು ಎಂಬ ಷರತ್ತಿನೊಂದಿಗೆ ಮೀಸಲಿಟ್ಟಿತ್ತು. ಇದು ಸುಲ್ಕೇರಿ ಗ್ರಾಮದ ನಾಯಿದ ಗುರಿ ಮಲೆಕುಡಿಯ ಸಮುದಾಯದ ಜನರಿಗೆ ಹಕ್ಕುಪತ್ರ ಸಿಗಬಾರದು ಎಂಬ ನಿಟ್ಟಿನಲ್ಲಿ ನಡೆಸಲಾದ ಷಡ್ಯಂತ್ರ ಎಂದು ಅವರು ಆರೋಪಿಸಿದರು.
ಸಂಘದ ಪದಾಧಿಕಾರಿಗಳಾದ ವಸಂತಿ ನೆಲ್ಲಿಕಾರು, ಬಾಲಕೃಷ್ಣ, ಗಣೇಶ್,ಸಂಜೀವ, ಹರೀಶ್ ಉಪಸ್ಥಿತರಿದ್ದರು.
..................................