

ಲೂಧಿಯಾನ : ಕರೊನಾ ಉಲ್ಬಣವಾಗುತ್ತಿರುವುದನ್ನು ತಡೆಯಲು ಪಂಜಾಬಿನಲ್ಲಿ ಸಂಜೆ 6 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ವಿಧಿಸಲಾಗಿದೆ. ಆದರೆ ಈ ಆದೇಶವನ್ನು ಲೆಕ್ಕಿಸದೆ, ಲೂಧಿಯಾನದಲ್ಲಿ 150 ಜನರ ತಂಡದೊಂದಿಗೆ ವೆಬ್ ಧಾರಾವಾಹಿಯೊಂದರ ಶೂಟಿಂಗ್ ನಡೆಸುತ್ತಿದ್ದುದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ನಟ ಜಿಮ್ಮಿ ಶೇರ್ಗಿಲ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಈಶ್ವರ್ ನಿವಾಸ್ ಸೇರಿದಂತೆ 35 ಜನರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕರ್ಫ್ಯೂ ಜಾರಿಯಾಗಿ ಎರಡು ಗಂಟೆಗಳು ಕಳೆದರೂ ಲೂಧಿಯಾನದ ಆರ್ಯ ಸೀನಿಯರ್ ಸೆಕೆಂಡರಿ ಸ್ಕೂಲ್ನಲ್ಲಿ 150 ಜನ ಸಿಬ್ಬಂದಿಯೊಂದಿಗೆ ಹಿಂದಿ ವೆಬ್ ಧಾರಾವಾಹಿಯಾದ 'ಯುವರ್ ಆನರ್'ನ ಚಿತ್ರೀಕರಣ ನಡೆಯುತ್ತಿತ್ತು. ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಪೊಲೀಸರು ದಾಳಿ ನಡೆಸಿದಾಗ ಧಾರಾವಾಹಿಯಲ್ಲಿ ನ್ಯಾಯಾಧೀಶರ ಪಾತ್ರ ವಹಿಸುತ್ತಿರುವ ಜಿಮ್ಮಿ ಶೇರ್ಗಿಲ್ ಅವರನ್ನೊಳಗೊಂಡ ಕೋರ್ಟ್ ಸೀನ್ಅನ್ನು ಸೆರೆ ಹಿಡಿಯಲಾಗುತ್ತಿತ್ತು ಎಂದು ಸಬ್ಇನ್ಸ್ಪೆಕ್ಟರ್ ಹರ್ಜೀತ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಕರೊನಾಗೆ 2 ಲಕ್ಷ ಜನರನ್ನು ಕಳೆದುಕೊಂಡ ಭಾರತ
ನಿರ್ದೇಶಕ ಈಶ್ವರ್ ನಿವಾಸ್, ನಿರ್ಮಾಣ ತಂಡದ ಆಕಾಶ್ದೀಪ್ ಸಿಂಗ್ ಮತ್ತು ಮಂದೀಪ್ ಸಿಂಗ್ ಎಂಬುವರನ್ನು ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಒಟ್ಟು 35 ಜನರ ವಿರುದ್ಧ ಸರ್ಕಾರಿ ಆದೇಶವನ್ನು ಉಲ್ಲಂಘಿಸಿದ ಮತ್ತು ರೋಗ ಹರಡುವುದಕ್ಕೆ ಎಡೆಮಾಡಿಕೊಡುವಂತೆ ನಿರ್ಲಕ್ಷ್ಯವಹಿಸಿದ ಆರೋಪಗಳನ್ನು ಐಪಿಸಿ ಸೆಕ್ಷನ್ 188, 269 ಮತ್ತು ಎಪಿಡೆಮಿಕ್ ಡಿಸೀಸಸ್ ಆ್ಯಕ್ಟ್ನ ಸೆಕ್ಷನ್ 3 ರಡಿ ಹೊರಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. (ಏಜೆನ್ಸೀಸ್)