

ಲಂಡನ್: ಇಂಗ್ಲೆಂಡ್ ತಂಡ ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್‌ನಲ್ಲಿ ಸೋಲು ಕಂಡ ಬೆನ್ನಲ್ಲೇ ನ್ಯೂಜಿಲೆಂಡ್ ಕ್ರಿಕೆಟಿಗರು ಆಂಗ್ಲರ ಕಾಲೆಳೆದಿದ್ದಾರೆ. ಈ ಮೂಲಕ 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪಂದ್ಯ-ಸೂಪರ್ ಓವರ್‌ನಲ್ಲಿ ಟೈ ಸಾಧಿಸಿದರೂ, ಬೌಂಡರಿ ಕೌಂಟ್‌ನಲ್ಲಿ ಅನುಭವಿಸಿದ್ದ ನಿರಾಸೆಗೆ ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.
ಹ್ಯಾರಿ ಕೇನ್ ಸಾರಥ್ಯದ ಇಂಗ್ಲೆಂಡ್ ತಂಡ ಆರಂಭಿಕ ಮುನ್ನಡೆಯ ಬಳಿಕ 1-1 ಸಮಬಲಕ್ಕೆ ತೃಪ್ತಿಪಟ್ಟು, ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿ ವಿರುದ್ಧ ಸೋಲು ಅನುಭವಿಸಿತ್ತು. ಹೀಗಾಗಿ ನ್ಯೂಜಿಲೆಂಡ್ ಆಲ್ರೌಂಡರ್ ಜಿಮ್ಮಿ ನೀಶಾಮ್ ಮತ್ತು ಮಾಜಿ ಆಲ್ರೌಂಡರ್ ಸ್ಕಾಟ್ ಸ್ಟೈರಿಸ್ ಟ್ವಿಟರ್‌ನಲ್ಲಿ ಆಂಗ್ಲರಿಗೆ ತಮಾಷೆಯ ಟ್ವೀಟ್ ಮೂಲಕ ಚಾಟಿ ಬೀಸಿದ್ದಾರೆ.
2019ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧವೇ ಬೌಂಡರಿ ಕೌಂಟ್‌ನಲ್ಲಿ ಪ್ರಶಸ್ತಿ ಕೈತಪ್ಪಿದ್ದನ್ನು ಉಲ್ಲೇಖಿಸಿ ನೀಶಾಮ್, ‘ಪೆನಾಲ್ಟಿ ಶೂಟೌಟ್ ಯಾಕೆ ಬೇಕಿತ್ತು? ಪಂದ್ಯದಲ್ಲಿ ಹೆಚ್ಚು ಪಾಸ್ ಮಾಡಿದವರನ್ನು ವಿಜೇತರೆಂದು ಆರಿಸಲು ಆಗದೇ?’ ಎಂದು ಟ್ವೀಟಿಸಿದ್ದು, ಜೋಕಿಂಗ್ ಎಂದು ಹ್ಯಾಷ್‌ಟ್ಯಾಗ್ ಕೂಡ ಸೇರಿಸಿದ್ದಾರೆ. ಇನ್ನು ಸ್ಕಾಟ್ ಸ್ಟೈರಿಸ್ ಅವರು ‘ಸ್ಟಿಲ್ ಸಾಲ್ಟಿ’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ, ‘ನನಗೆ ಅರ್ಥವಾಗುತ್ತಿಲ್ಲ.... ಇಂಗ್ಲೆಂಡ್ ಹೆಚ್ಚಿನ ಕಾರ್ನರ್ ಪಡೆದಿತ್ತು. ಅವರೇ ಚಾಂಪಿಯನ್ನರು!’ ಎಂದು ಟ್ವೀಟಿಸಿ ಆಂಗ್ಲರ ಕಾಲೆಳೆದಿದ್ದಾರೆ.
ಒಟ್ಟಾರೆ, ಇತ್ತೀಚೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಭಾರತ ವಿರುದ್ಧ ಕಂಡ ಭರ್ಜರಿ ಗೆಲುವಿನ ನಡುವೆಯೂ 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅನುಭವಿಸಿದ್ದ ನಿರಾಸೆ ಕಿವೀಸ್ ಕ್ರಿಕೆಟಿಗರನ್ನು ಈಗಲೂ ಎಷ್ಟು ಕಾಡುತ್ತಿದೆ ಎಂಬುದನ್ನು ಇದು ಎತ್ತಿ ತೋರಿಸಿದೆ.