ಭಾವಿ ಪತಿಯೊಂದಿಗೆ ಮದುವೆ ನಿಶ್ಚಯ ಮುರಿದುಕೊಂಡ ಯುವತಿಗೆ ಮರುದಿನವೇ ಕಾದಿತ್ತು ಶಾಕ್!

Marriage Tragic
Published on

ಲಂಡನ್​: ತಾಯಿಯ ಮುಂದೆಯೇ ಮಗಳನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪದಲ್ಲಿ ಬಂಧಿಯಾಗಿರುವ ಆರೋಪಿಯೊಬ್ಬ ತನ್ನ ತಪ್ಪಿನ ಅರಿವಾಗಿ ನ್ಯಾಯಾಲಯದ ಮುಂದೆ ಇದೀಗ ಸತ್ಯ ಒಪ್ಪಿಕೊಂಡಿದ್ದಾನೆ.

ಭವಾನಿ ಪ್ರವೀಣ್ (21)​ ಮೃತ ಯುವತಿ. ಜಿಗುಕುಮಾರ್​ ಸೊರ್ಥಿ (23) ಆರೋಪಿ. ಮಾರ್ಚ್​ 2ರಂದು ಇಂಗ್ಲೆಂಡ್​ನ ಲೈಸೆಸ್ಟರ್​ ನಗರದಲ್ಲಿರುವ ಭವಾನಿ ಮನೆಯಲ್ಲಿ ದಾಳಿ ಮಾಡಿದ ಜಿಗುಕುಮಾರ್ ಆಕೆಯ ತಾಯಿಯ ಮುಂದೆಯೇ ಎದೆ, ಮಂಡಿ ಮತ್ತು ಬೆನ್ನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ. ಮಗಳ ಬದಲು ನನ್ನನ್ನು ಕೊಲ್ಲು ಎಂದರು ಬಿಡದೆ ತನ್ನ ಕ್ರೌರ್ಯ ಮೆರೆದಿದ್ದ.

ಭಾರತದ ಮೂಲದ ಭವಾನಿ ಇಂಗ್ಲೆಂಡ್​ನ ಲೈಸೆಸ್ಟರ್​ನಲ್ಲಿ ವಾಸವಿದ್ದಳು. ಭವಾನಿ ಮತ್ತು ಜಿಗುಕುಮಾರ್​ ನಡುವೆ ಮದುವೆ ನಿಶ್ಚಯವಾಗಿತ್ತು. ಆದರೆ, ಮದುವೆ ಬೇಡವೆಂದು ಹೇಳಿದ ದಿನದ ಬೆನ್ನಲ್ಲೇ ಆರೋಪಿ ತಾಯಿಯ ಮುಂದೆಯೇ ಮಗಳನ್ನು ಕೊಲೆ ಮಾಡಿದ್ದಾನೆ. ಉಳಿಸಿಕೊಳ್ಳು ಸಾಕಷ್ಟು ಪ್ರಯತ್ನ ಮಾಡಿದರೂ ಅನೇಕ ಬಾರಿ ಚಾಕು ಇರಿದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಜಿಗುಕುಮಾರ್​ ಮದ್ಯ ವ್ಯಸನಿಯಾಗಿದ್ದರಿಂದ ಮದುವೆ ನಿಶ್ಚಯವನ್ನು ಮುರಿದುಕೊಂಡಿದ್ದರು. ಇದೇ ಆತನ ಕೋಪಕ್ಕೆ ಕಾರಣವಾಗಿತ್ತು. ಸಂಬಂಧ ಮುರಿದುಬಿದ್ದ ದಿನದ ಬೆನ್ನಲ್ಲೇ ಜಿಗು ದಾಳಿ ಮಾಡಿದ್ದಾನೆ. ಈ ಎಲ್ಲಾ ದೃಶ್ಯವಳಿಗಳು ಮನೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲೂ ರೆಕಾರ್ಡ್​ ಆಗಿದ್ದು, ಸದ್ಯ ಬಂಧಿಯಾಗಿರುವ ಜಿಗುಕುಮಾರ್​, ಕೊಲೆ ಮಾಡಿರುವುದನ್ನು ಇದೀಗ ಒಪ್ಪಿಕೊಂಡಿದ್ದಾನೆ. ನನ್ನ ಜೀವನ ಸರ್ವನಾಶ ಆಗಿ ಹೋಯಿತು ಎಂದು ಕಣ್ಣೀರಿಟ್ಟಿದ್ದಾನೆ.

ಬುಧವಾರವಷ್ಟೇ ಪ್ರಕರಣದ ತೀರ್ಪು ಹೊರಬಿದ್ದಿದ್ದು, ನ್ಯಾಯಾಲಯ ಜಿಗುಕುಮಾರ್​ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಇನ್ನೊಂದೆಡೆ ಮಗಳನ್ನು ಕಳೆದುಕೊಂಡ ಕುಟುಂಬ ತುಂಬಾ ದುಃಖದಲ್ಲಿದ್ದು, ನನ್ನ ಮಗಳಿಗೆ ಕೇವಲ 21 ವರ್ಷವಾಗಿತ್ತಷ್ಟೇ, ಒಳ್ಳೆಯ ಹುಡುಗಿಯಾಗಿದ್ದಳು. ನಮ್ಮೆಲ್ಲರ ಮುದ್ದಿನ ಮಗಳಾಗಿದ್ದಳು ಎಂದು ಭವಾನಿ ತಂದೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net