

ನವದೆಹಲಿ: ಒಬ್ಬ ಮನುಷ್ಯನನ್ನು ಹೋಲುವ ಏಳು ಮಂದಿ ಮನುಷ್ಯರು ವಿಶ್ವದಲ್ಲಿ ಇರುತ್ತಾರೆ ಎಂದು ಹಿರಿಯರು ಹೇಳುತ್ತಿದ್ದರು. ಅದರಂತೆ ಪ್ರಧಾನಿ ಮೋದಿ, ರಜನಿ ಕಾಂತ್, ಸಿದ್ದರಾಮಯ್ಯ ಮತ್ತು ಇತರ ಕೆಲವು ಸೆಲೆಬ್ರಿಟಿಗಳನ್ನು ಹೋಲುವ ಜನರನ್ನು ನೋಡಿರುತ್ತೀರಿ. ಇತ್ತೀಚೆಗಷ್ಟೇ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್(Hemant Soren) ಅವರಂತೆ ಕಾಣುವ ವ್ಯಕ್ತಿಯೊಬ್ಬ ಅವರನ್ನು ಭೇಟಿ ಮಾಡಿದ್ದು, ಸ್ವತಃ ಮುಖ್ಯಮಂತ್ರಿಗಳೇ ಆ ಫೋಟೋಗಳನ್ನು ಹಂಚಿಕೊಂಡಿರುವುದು ನೆಟಿಜನ್ಗಳಿಗೆ ಅಚ್ಚರಿ ಮೂಡಿಸಿದೆ.
ರಾಂಚಿಯ ರಂಗಭೂಮಿ ಕಲಾವಿದ ಮುನ್ನಾ ಲೋಹ್ರಾ ಇತ್ತೀಚೆಗಷ್ಟೇ ಹೇಮಂತ್ ಸೊರೆನ್ ನಿವಾಸದಲ್ಲಿ ಭೇಟಿಯಾಗಿದ್ದರು. ಹೇಮಂತ್ ಸೊರೆನ್ ಈ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ತಮ್ಮ ಅಧಿಕೃತ ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. 'ಹೇಮಂತ್ ಸೋರೆನ್ ಅವರನ್ನು ಭೇಟಿಯಾದ ಮತ್ತೊಬ್ಬ ಹೇಮಂತ್' ಎಂಬ ಶೀರ್ಷಿಕೆಯನ್ನು ಸೇರಿಸಿದ್ದಾರೆ.
ಇದರಿಂದ ನೆಟ್ಟಿಗರು ಇವರಿಬ್ಬರು ಒಂದೇ ರೀತಿ ಕಾಣುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕುಂಭಮೇಳದಲ್ಲಿ ಬೇರ್ಪಟ್ಟ ಅಣ್ಣ-ತಮ್ಮಂದಿರು ಮತ್ತೆ ಒಂದಾದ ಹಾಗಿದೆ ಎಂದು ನೆಟಿಜನ್ಸ್ ಕಾಮೆಂಟ್ ಮಾಡುತ್ತಿದ್ದು, ಈ ಪೋಸ್ಟ್ ವೈರಲ್ ಆಗಿದೆ.
ಇಷ್ಟಕ್ಕೂ ಫೋಟೋದ ಎಡಭಾಗದಲ್ಲಿ ಹೇಮಂತ್ ಸೊರೆನ್ ಮತ್ತು ಬಲಭಾಗದಲ್ಲಿ ಸ್ಕಾರ್ಫ್ ಹೊಂದಿರುವ ವ್ಯಕ್ತಿ ಲೋಹಾ ಅವರಾಗಿದ್ದಾರೆ.