

ಕಾರವಾರ: ನ್ಯಾಯಮೂರ್ತಿಯಾಗಬಯಸಿದ್ದ ಹೈಕೋರ್ಟ್ ವಕೀಲರೊಬ್ಬರು ಈಗ ಚುನಾವಣಾ ಕಣಕ್ಕೆ ಧುಮುಕಿದ್ದು, ಜೆಡಿಎಸ್ ಟಿಕೆಟ್ ಗಿಟ್ಟಿಸಿದ್ದಾರೆ.
ಹೈಕೋಟರ್ಟ್ನಲ್ಲಿ ವಕೀಲರಾಗಿರುವ ಭಟ್ಕಳ ಸರ್ಪನಕಟ್ಟೆ ಮೂಲದ ನಾಗೇಂದ್ರ ನಾಯ್ಕ ಅವರಿಗೆ ಜೆಡಿಎಸ್ ಈ ಬಾರಿಯ ಭಟ್ಕಳ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿದೆ.
ವಕೀಲರಾಗಿ ಸಾಕಷ್ಟ ಅನುಭವ ಹೊಂದಿರುವ ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಬಯಸಿದ್ದರು. ಮೂರು ಬಾರಿ ಅವರ ಹೆಸರು ನ್ಯಾಯಮೂರ್ತಿಗಳ ನೇಮಕ ಮಾಡುವ ಸಮಿತಿ ಕೊಲೀಜಿಯಂಗೆ ನಾಮನಿರ್ದೇಶಿತವಾಗಿತ್ತು. ಆದರೆ, ಅವರ ಹೆಸರು ಅಂತಿಮವಾಗಿರಲಿಲ್ಲ.
ಇದರಿಂದ ಬೇಸರಗೊಂಡ ಅವರು ಬಿಜೆಪಿ ಸರ್ಕಾರವೇ ತಮ್ಮ ಆಯ್ಕೆಯನ್ನು ತಪ್ಪಿಸಿದೆ ಎಂದು ಆರೋಪಿಸಿದ್ದಾರೆ. ಈಗ ಅವರು ಬಿಜೆಪಿ ವಿರುದ್ಧ ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ಬೆಂಗಳೂರಿನಲ್ಲೇ ಅವರು ವಕೀಲ ವೃತ್ತಿಯ ಜತೆಗೆ ಪುಷ್ಪ ಕೃಷಿ ಮಾಡಿ ಹೆಸರಾಗಿದ್ದಾರೆ. ಭಟ್ಕಳದಲ್ಲಿ ಪ್ರಬಲವಾಗಿರುವ ನಾಮಧಾರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಶಿರಸಿ ತೋಟಗಾರಿಕೆ ಕಾಲೇಜ್ನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ.ನಾಗೇಶ ನಾಯ್ಕ ಅವರಿಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ನೀಡಲಾಗಿದೆ. ವರ್ಷದ ಹಿಂದೆ ಅವರು ಸ್ವಯಂ ನಿವೃತ್ತಿ ಪಡೆದು ರಾಜಕೀಯಕ್ಕೆ ಧುಮುಕಿದ್ದರು. ಕುಮಟಾ ಮೂಲದವರಾಗಿರುವ ನಾಗೇಶ ನಾಯ್ಕ ಶಿರಸಿಯಲ್ಲಿ ವಾಸವಿದ್ದು, ಕಳೆದ ಕೆಲ ತಿಂಗಳಿಂದ ಬನವಾಸಿ, ಯಲ್ಲಾಪುರ ಭಾಗದಲ್ಲಿ ಓಡಾಟ ನಡೆಸಿ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ.