

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿಲ್ಲೆಯ :ಸೇಡಂ ಮತಕ್ಷೇತ್ರದಾದ್ಯಂತ ಬರದ ಛಾಯೆ ಆವರಿಸಿದ್ದು ಆಗಸ್ಟ್ ತಿಂಗಳು ಮುಗಿದರೂ ವಾಡಿಕೆಯ ಮಳೆ ಬಿದ್ದಿಲ್ಲ ಆದ್ದರಿಂದ ಕ್ಷೇತ್ರದ ರೈತರು ಸಂಕಷ್ಟದಲ್ಲಿದ್ದಾರೆ ರಾಜ್ಯ ಸರ್ಕಾರ ಕೂಡಲೇ ಬರಗಾಲ ಪೀಡಿತ ತಾಲೂಕು ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲತರಾಜ್ ಗುತ್ತೇದಾರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತರು ಸಾಲ ಮಾಡಿ ಬೀಜ,ರಸಗೊಬ್ಬರ ಖರೀದಿಸಿ ತೊಗರಿ,ಹತ್ತಿ ಸೇರಿದಂತೆ ವಿವಿಧ ಬೀಜಗಳನ್ನು ಬಿತ್ತನೆ ಮಾಡಿದ್ದಾರೆ.ಆದರೆ ಮಳೆ ಬಾರದಿರುವುದರಿಂದ ಸಂಪೂರ್ಣವಾಗಿ ಬಾಡಿ ಹೋಗುತ್ತಿವೆ.ಇದರಿಂದಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಜೂನ್ ತಿಂಗಳಿನಲ್ಲಿ ಮುಂಗಾರು ಮಳೆ ಪ್ರವೇಶಿಸಬೇಕಾಗಿತ್ತು.ಆದರೆ ಜೂಲೈ ತಿಂಗಳಿನಲ್ಲಿ ಅಲ್ಪ ಸ್ವಲ್ಪ ಮಳೆಯಾದ ಬಳಿಕ ರೈತರು ಸಂಕಷ್ಟಗಳ ನಡುವೆ ಬಿತ್ತನೆ ಕಾರ್ಯ ಮಾಡಿದ್ದಾರೆ.ಆದರೆ ಅದಾದ ಬಳಿಕ ಮಳೆ ಬಾರದೇ ಇರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿ ಕಂಗಾಲಾಗಿದ್ದಾರೆ.
ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಿದೆ.ತಕ್ಷಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ ರೈತರಿಗೆ ಪರಿಹಾರ ಒದಗಿಸಬೇಕು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸೇಡಂ ಮತಕ್ಷೇತ್ರದಲ್ಲಿ ಈ ಸಲ ತೊಗರಿ ಹೆಚ್ಚಿಗೆ ಬಿತ್ತನೆಯಾಗಿದೆ. ಎಣ್ಣೆಕಾಳು, ವಾಣಿಜ್ಯ ಬೆಳೆಗಳು ನಿಗದಿತ ಪ್ರಮಾಣದಂತೆ ಬಿತ್ತನೆಯಾಗಿವೆ ಆದರೆ ಸಕಾಲಕ್ಕೆ ಮಳೆ ಬಾರದೇ ಇರುವುದರಿಂದ ತೇವಾಂಶ ಕೊರತೆಯಿಂದ ಬೆಳೆಗಳು ಒಣಗುತ್ತಿವೆ ಎಂದು ಹೇಳಿದ್ದಾರೆ.
ಮಳೆ ಬಾರದೇ ಇರುವುದರಿಂದ ಜನ, ಜಾನವಾರುಗಳು ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿವೆ. ತೀವ್ರ ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಕಾರ್ಯ ಮಾಡಬೇಕು ಅಲ್ಲದೇ ಜಾನುವಾರುಗಳಿಗಾಗಿ ಗ್ರಾ.ಪಂ ಮಟ್ಟದಲ್ಲಿ ಮೇವು ಕೇಂದ್ರ ಸ್ಥಾಪಿಸಬೇಕು ಎಂದು ಬಾಲರಾಜ್ ಗುತ್ತೇದಾರ ಆಗ್ರಹಿಸಿದ್ದಾರೆ.