

ಮುಂಬೈ; ದಕ್ಷಿಣ ಚಿತ್ರರಂಗದ ಸ್ಟಾರ್ ಚಿತ್ರಗಳಿಗೆ ಉತ್ತರ ಭಾರತದಲ್ಲಿ ದೊಡ್ಡ ಬೇಡಿಕೆ ಇದೆ. ಹಾಗಾಗಿಯೇ, ದಕ್ಷಿಣದ ಚಿತ್ರಗಳ ಹಿಂದಿ ಅವತರಣಿಕೆಗಳನ್ನು ಕೋಟಿ ಕೋಟಿ ಕೊಟ್ಟು ತೆಗೆದುಕೊಳ್ಳಲಾಗುತ್ತಿದೆ. ಈಗ ಸೂರ್ಯ ಅಭಿನಯದ ಹೊಸ ಚಿತ್ರವು ಈ ವಿಷಯದಲ್ಲಿ ಹೊಸ ದಾಖಲೆಯನ್ನೇ ಮಾಡಿದೆ.
ಇದನ್ನೂ ಓದಿ: ‘ಛೂ ಮಂತರ್’ ಮೂಲಕ ತಮ್ಮ ಆಸೆ ತೀರಿಸಿಕೊಂಡ ಶರಣ್ …
ಶಿವ ನಿರ್ದೇಶನದಲ್ಲಿ ಸೂರ್ಯ ಹೊಸದೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಸಹ 'ಬಾಹುಬಲಿ' ತರಹದ ಕಾಸ್ಟ್ಯೂಮ್ ಡ್ರಾಮಾ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಸೂರ್ಯಗೆ ನಾಯಕಿಯಾಗಿ ಬಾಲಿವುಡ್ ನಟಿ ದಿಶಾ ಪಟಾಣಿ ನಟಿಸುತ್ತಿದ್ದಾರೆ. ಈ ಚಿತ್ರದ ಹಿಂದಿ ಸ್ಯಾಟಿಲೈಟ್, ಡಿಜಿಟಲ್ ಮತ್ತು ವಿತರಣೆಯ ಹಕ್ಕುಗಳು ಎಷ್ಟಕ್ಕೆ ವ್ಯಾಪಾರವಾಗಿದೆ ಗೊತ್ತಾ? ಮೂಲಗಳ ಪ್ರಕಾರ 100 ಕೋಟಿ ರೂ.ಗಳಿಗಂತೆ.
ಹೌದು, ಬಾಲಿವುಡ್ನ ಖ್ಯಾತ ನಿರ್ಮಾಪಕ ಮತ್ತು ವಿತರಕ ಜಯಂತಿಲಾಲ್ ಗಡ ಈ ಹಿಂದೆ ರಾಜಮೌಳಿ ನಿರ್ದೇಶನದ 'RRR' ಚಿತ್ರವನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದ್ದಷ್ಟೇ ಅಲ್ಲ, ಒಳ್ಳೆಯ ಲಾಭವನ್ನೂ ಮಾಡಿದ್ದರು. ಈಗ ಅವರು , ಸೂರ್ಯ ಅಭಿನಯದ ಹೊಸ ಚಿತ್ರದ ಹಿಂದಿ ಸ್ಯಾಟಿಲೈಟ್, ಡಿಜಿಟಲ್ ಮತ್ತು ವಿತರಣೆಯ ಹಕ್ಕುಗಳನ್ನು 100 ಕೋಟಿ ರೂ.ಗಳಿಗೆ ಖರೀದಿಸಿದ್ದಾರಂತೆ. ಹಾಗಂತ ಅವರೇನು ಹೇಳಿಕೊಂಡಿಲ್ಲ. ಹಾಗೆಯೇ ಚಿತ್ರತಂಡದವರು ಸಹ ಈ ಬಗ್ಗೆ ಮಾತನಾಡಿಲ್ಲ. ಆದರೆ, ಇಂಥದ್ದೊಂದು ಸುದ್ದಿಯೊಂದು ಬಾಲಿವುಡ್ ಮತ್ತು ಕಾಲಿವುಡ್ಗಳಲ್ಲಿ ಜೋರಾಗಿ ಕೇಳಿ ಬರುತ್ತಿದೆ.
ಈ ಹಣ ಸ್ವಲ್ಪ ಜಾಸ್ತಿಯಾಗಲಿಲ್ಲವಾ? ಎಂಬ ಪ್ರಶ್ನೆ ಸಹಜ. ಏಕೆಂದರೆ, ಸೂರ್ಯ ಅಭಿನಯದ ಚಿತ್ರವೊಂದು ಇದುವರೆಗೂ ಉತ್ತರ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿರಲಿಲ್ಲ. ಆದರೆ, ಸೂರ್ಯ ಅಭಿನಯದ ಚಿತ್ರಕ್ಕೆ ಓಟಿಟಿ ಮತ್ತು ಕಿರುತೆರೆಯಲ್ಲಿ ದೊಡ್ಡ ಬಬೇಡಿಕೆ ಇದೆಯಂತೆ. ಹಾಗಾಗಿ, ಎಲ್ಲ ಹಕ್ಕುಗಳನ್ನು ಜಯಂತಿಲಾಲ್ ಗಡ ಖರೀದಿಸಿದ್ದು, ಅವರು ಇನ್ನಷ್ಟು ಹೆಚ್ಚಿನ ಮೊತ್ತಕ್ಕೆ ಬೇರೆಯವರಿಗೆ ಮಾರಿಕೊಳ್ಳುವ ಸಾಧ್ಯತೆ ಇದೆ.
ಇನ್ನೂ ಹೆಸರಿಡದ ಈ ಚಿತ್ರವು 3ಡಿಯಲ್ಲಿ ತಯಾರಾಗುತ್ತಿರುವುದಷ್ಟೇ ಅಲ್ಲ, 10 ಭಾಷೆಗಳಿಗೆ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ವಿಶೇಷ.