ಈ ಆರು ಓಟಿಟಿಗಳು 2022ರಲ್ಲಿ ಖರ್ಚು ಮಾಡಿದ್ದು ಎಷ್ಟು ಗೊತ್ತಾ?

OTT 1
Published on

ಮುಂಬೈ: ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಓಟಿಟಿಗಳಿಗೆ ಸಖತ್​ ಡಿಮ್ಯಾಂಡ್​ ಬಂದು ಬಿಟ್ಟಿದೆ. ಅದರಲ್ಲೂ ಲಾಕ್​ಡೌನ್​ ನಂತರ ಚಿತ್ರಮಂದಿರಗಳು ಮತ್ತು ಟಿವಿಗಿಂತ ಹೆಚ್ಚಾಗಿ ಓಟಿಟಿಯಲ್ಲಿ ಚಿತ್ರಗಳನ್ನು ಮತ್ತು ವೆಬ್​ಸೀರೀಸ್​ಗಳನ್ನು ನೋಡುವವರ ಸಂಖ್ಯೆ ಹೆಚ್ಚುತ್ತಿದೆ. ನೋಡುಗರನ್ನು ಸೆಳೆಯುವುದಕ್ಕೆ ಓಟಿಟಿಗಳು ಸಹ ಹೊಸಹೊಸ ಚಿತ್ರ ಮತ್ತು ವೆಬ್​ಸೀರೀಸ್​ಗಳು ನಿರ್ಮಿಸಲು ಹಣ ಎತ್ತಿಡುತ್ತಿವೆ. ಹಾಗೆ, ಕಳೆದ ವರ್ಷ ಆರು ಓಟಿಟಿಗಳು ಹೊಸ ಕಂಟೆಂಟ್​ ಸೃಷ್ಟಿಸುವುದಕ್ಕೆ ಮಾಡಿರುವ ಖರ್ಚು ಎಷ್ಟು ಗೊತ್ತ?

ಕೇಳಿದರೆ ಆಶ್ಚರ್ಯವಾಗಬಹುದು. ಒಂದ ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ ಅಮೇಜಾನ್​ ಪ್ರೈಮ್​, ನೆಟ್​ಫ್ಲಿಕ್ಸ್​, ಡಿಸ್ನಿ ಹಾಟ್​​ಸ್ಟಾರ್​, ಸೋನಿ ಲಿವ್​, ಜೀ5 ಮತ್ತು ವೂಟ್​ ಎಂಬ ಆರು ಪ್ರಮುಖ ಓಟಿಟಿ ವೇದಿಕೆಗಳು ಖರ್ಚು ಮಾಡಿರುವ ಮೊತ್ತ ಎಷ್ಟು ಗೊತ್ತಾ? 600ರಿಂದ 700 ಮಿಲಿಯನ್​ ಡಾಲರ್​ಗಳು. ಅದನ್ನು ರೂಪಾಯಿಗಳ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 5000 ಕೋಟಿ ರೂ.ಗಳಷ್ಟಾಗುತ್ತದೆ.

ಹಾಗೆ ನೋಡಿದರೆ, ಕಳೆದ ವರ್ಷ ಓಟಿಟಿಗಳಿಗೆ ಅಷ್ಟೇನೂ ಒಳ್ಳೆಯ ವರ್ಷವಾಗಿರಲಿಲ್ಲ. ಹಲವು ವೆಬ್​ಸೀರೀಸ್​ಗಳ ಸೀಕ್ವೆಲ್​ಗಳು ಬಂದವಾದರೂ, ಅವೆಲ್ಲ ದೊಡ್ಡ ಮಟ್ಟಿಗೆ ಜನಪ್ರಿಯತೆಯನ್ನು ಪಡೆಯಲಿಲ್ಲ. ಇನ್ನು, ಓಟಿಟಿಗಳಲ್ಲಿ ಯಾವೊಂದು ಚಿತ್ರ ಸಹ ನೇರವಾಗಿ ಬಿಡುಗಡೆಯಾಗಿ ಹಿಟ್​ ಆಗಲಿಲ್ಲ. ಹಾಗಾಗಿ, 2020 ಅಥವಾ 2021ಕ್ಕೆ ಹೋಲಿಸಿದರೆ, ಕಳೆದ ವರ್ಷ ಓಟಿಟಿಯಲ್ಲಿ ನೇರವಾಗಿ ಬಿಡುಗಡೆಯಾದ ಚಿತ್ರಗಳು ಕಡಿಮೆ ಎಂದೇ ಹೇಳಬಹುದು. ಆದರೂ ಒಂದು ವರ್ಷದಲ್ಲಿ ಆರು ಓಟಿಟಿಗಳು ಇಷ್ಟೊಂದು ಮೊತ್ತ ಖರ್ಚು ಮಾಡಿರುವುದು ದೊಡ್ಡ ಆಶ್ಚರ್ಯವೇ ಹೌದು.

ಈ ಪೈಕಿ ಅಮೇಜಾನ್​ ಒಂದೇ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ 40 ಹೊಸ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಾಗಿ ಘೋಷಿಸಿದೆ. ನೆಟ್​ಫ್ಲಿಕ್ಸ್​ ಸಹ ಒಂದಿಷ್ಟು ಘೋಷಣೆಗಳನ್ನು ಮಾಡಿದ್ದು, ಅವುಗಳಲ್ಲಿ ಕೆಲವು ಕಳೆದ ವರ್ಷ ಬಿಡುಗಡೆಯಾದರೆ, ಈ ವರ್ಷ ಇನ್ನಷ್ಟು ಬಿಡುಗಡೆಯಾಗಲಿವೆ.

ಸದ್ಯ ಭಾರತದಲ್ಲಿ ಓಟಿಟಿ ನೋಡುವವರ ಸಂಖ್ಯೆ ಕಡಿಮೆ ಇದ್ದರೂ, ಮುಂದಿನ ವರ್ಷಗಳಲ್ಲಿ ಗಣನೀಯವಾಗಿ ಏರಲಿವೆ ಎಂಬ ಮಾತೊಂದು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಪ್ರಮುಖ ಓಟಿಟಿ ವೇದಿಕೆಗಳು ಈಗಲೇ ಒಂದಿಷ್ಟು ಹೊಸ ಮತ್ತು ಸ್ವಂತ ಕಾರ್ಯಕ್ರಮಗಳನ್ನು ಮಾಡಿಟ್ಟುಕೊಳ್ಳುವುದಕ್ಕೆ ಮುಂದಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net