ಕಂಗನಾರಿಂದ ನಾನು ನಿರೀಕ್ಷಿಸಿದ್ದು ಸಿಕ್ಕಿದೆ; ಜಾವೇದ್ ಅಖ್ತರ್ ಹೇಳಿದ್ದೇನು? | Javed Akhtar

Untitled design (64)
Published on

ಮುಂಬೈ: ಪ್ರಸಿದ್ಧ ಬಾಲಿವುಡ್ ಬರಹಗಾರ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್(Javed Akhtar) ಮತ್ತು ಕಂಗನಾ ರಣಾವತ್​​ ನಡುವೆ ವರ್ಷಗಳ ಕಾಲ ಕಾನೂನು ಹೋರಾಟ ನಡೆಯುತ್ತಿತ್ತು. ಜಾವೇದ್ 2020ರಲ್ಲಿ ನಟಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇತ್ತೀಚೆಗೆ ಇಬ್ಬರೂ ತಮ್ಮ ಕಾನೂನು ವಿಷಯವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.

ಕಂಗನಾ ರಣಾವತ್​​ ಅವರು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಖ್ತರ್ ಜತೆಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಈ ವಿಷಯವನ್ನು ತಿಳಿಸಿದ್ದರು. ಆದರೀಗ ಈ ಇತ್ಯರ್ಥದ ಕುರಿತು ಜಾವೇದ್ ಅಖ್ತರ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನು ಕಂಗನಾರಿಂದ ಹಣವನ್ನು ನಿರೀಕ್ಷಿಸಿರಲಿಲ್ಲ. ಆದರೆ ನನಗೆ ಬೇಕಾದ್ದು ಸಿಕ್ಕಿದೆ ಎಂದು ಹೇಳಿದ್ದಾರೆ.

ಇಷ್ಟು ವರ್ಷಗಳ ನಂತರ ಈ ಪ್ರಕರಣಗಳು ಇತ್ಯರ್ಥವಾಗಿವೆ. ಕಂಗನಾ ಅವರು ತನ್ನ ಮಾತು ಮತ್ತು ಆರೋಪಗಳನ್ನು ಹಿಂದಕ್ಕೆ ಪಡೆದಿದ್ದಾರೆ. ಮತ್ತೆ ಎಂದಿಗೂ ಪುನರಾವರ್ತಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ನನಗೆ ಉಂಟಾದ ಎಲ್ಲಾ ಅನಾನುಕೂಲತೆಗಾಗಿ ಅವರು ಕ್ಷಮೆಯಾಚಿಸಿದ್ದಾರೆ. ಅವರು ತಮ್ಮ ಪ್ರಕರಣವನ್ನು ಸಹ ಹಿಂತೆಗೆದುಕೊಂಡಿದ್ದಾರೆ. ಪ್ರಕರಣದಲ್ಲಿ ನಾನು ಎಂದಿಗೂ ಕಂಗನಾರಿಂದ ಹಣ ನಿರೀಕ್ಷಿಸಿರಲಿಲ್ಲ. ಅವರು ಕ್ಷಮೆಯಾಚಿಸ ಬೇಕು ಎಂದು ಬಯಸಿದ್ದೆ, ಈಗ ನಾನು ಅದನ್ನು ಪಡೆದುಕೊಂಡಿದ್ದೇನೆ ಎಂದು ಜಾವೇದ್​ ಹೇಳಿದರು.

ನೀವು ಸಂತೋಷವಾಗಿದ್ದೀರಾ ಮತ್ತು ಶಾಂತಿಯಿಂದ ಇದ್ದೀರಾ ಎಂದು ಜಾವೇದ್ ಅಖ್ತರ್ ಅವರನ್ನು ಕೇಳಲಾಯಿತು ಅದಕ್ಕೆ ಪ್ರತಿಕ್ರಿಯಿಸಿದ ಅವರು, ನಹಿ, ಅಬ್ ದೇಖ್ತಾ ಹುನ್. ಕೋಯಿ ದೂಸ್ರಿ ಪರೇಶಾನಿ ಮುಲ್ ಲುಂಗಾ (ಇಲ್ಲ, ಈಗ ನಾನು ನೋಡುತ್ತೇನೆ. ನಾನು ಬೇರೆ ಯಾವುದಾದರೂ ತೊಂದರೆಯನ್ನು ಆಹ್ವಾನಿಸಬಹುದುದೇ) ಎಂದು ನಗುತ್ತಲೇ ಉತ್ತರಿಸಿದ್ದಾರೆ.

ಜಾವೇದ್ ಅಖ್ತರ್ ಮತ್ತು ಕಂಗನಾ ರಣಾವತ್​​​ ನಡುವಿನ ವಿವಾದದ ಬಗ್ಗೆ ಮಾತನಾಡಿದರೆ, ಅದು 9 ವರ್ಷ ಹಳೆಯದು. ಈ ವಿವಾದ 2016 ರಲ್ಲಿ ಪ್ರಾರಂಭವಾಯಿತು. ಆ ಸಮಯದಲ್ಲಿ ಕಂಗನಾ ರಣಾವತ್ ಮತ್ತು ಹೃತಿಕ್ ರೋಷನ್ ಅವರ ವಿವಾದ ನಡೆಯುತ್ತಿತ್ತು. ಅವರ ಇಮೇಲ್‌ಗಳು ಸುದ್ದಿಯಾಗುತ್ತಿದ್ದವು. ಜಾವೇದ್ ಅಖ್ತರ್ ಹೃತಿಕ್ ರೋಷನ್ ಕುಟುಂಬಕ್ಕೆ ಆಪ್ತರಾಗಿದ್ದರಿಂದ, ಅವರು ಕಂಗನಾ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದರು. ಅವರು ಕಂಗನಾಗೆ ಹೃತಿಕ್ ಬಳಿ ಕ್ಷಮೆಯಾಚಿಸುವಂತೆ ಹೇಳಿದ್ದರು.

ಆ ಸಮಯದಲ್ಲಿ ಕಂಗನಾ ಈ ಬಗ್ಗೆ ಏನನ್ನೂ ಹೇಳಲಿಲ್ಲ. ಆದರೆ 2020ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಮರಣದ ನಂತರ ಕಂಗನಾ ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಅದೇ ಸಮಯದಲ್ಲಿ ಸಂದರ್ಶನವೊಂದರಲ್ಲಿ ಜಾವೇದ್ ಅಖ್ತರ್ ಅವರ ಈ ವಿಷಯವನ್ನು ನೆನೆಪಿಸಿಕೊಂಡು, ಜಾವೇದ್ ಅಖ್ತರ್ ತನ್ನನ್ನು ತನ್ನ ಮನೆಗೆ ಕರೆದು ಹೃತಿಕ್‌ಗೆ ಕಿರುಕುಳ ನೀಡಿದರೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದರು.

ಇದರಿಂದ ಕೋಪಗೊಂಡ ಜಾವೇದ್ ಅಖ್ತರ್ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಇದಕ್ಕೆ ಪ್ರತೀಕಾರವಾಗಿ ಕಂಗನಾ ಜಾವೇದ್ ಅಖ್ತರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಇವರಿಬ್ಬರ ನಡುವಿನ ಕಾನೂನು ಹೋರಾಟವು 2020ರಲ್ಲಿ ಪ್ರಾರಂಭವಾಯಿತು. ನಂತರ ನ್ಯಾಯಾಲಯವು ಕಂಗನಾ ರಣಾವತ್​​ ಅವರ ಪ್ರಕರಣವನ್ನು ದುರ್ಬಲ ಎಂದು ಕರೆದು ವಜಾಗೊಳಿಸಿದರೂ, ಜಾವೇದ್ ಅಖ್ತರ್ ಸಲ್ಲಿಸಿದ ಮಾನನಷ್ಟ ಮೊಕದ್ದಮೆ ಮುಂದುವರೆಯಿತು. ಆದರೆ ಈಗ ಇಬ್ಬರೂ ರಾಜಿ ಮಾಡಿಕೊಂಡು ವಿವಾದವನ್ನು ಕೊನೆಗೊಳಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net