

ಮುಂಬೈ: ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್(Amitabh Bachchan) ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇಂದಿಗೂ ಅವರ ಬಳಿ ಹಲವು ಕಾರುಗಳು, ಬಂಗಲೆ ಮತ್ತು ಉತ್ತಮ ಬ್ಯಾಂಕ್ ಬ್ಯಾಲೆನ್ಸ್ ಇದೆ. ಆದರೆ ಅವರು ಕೆಟ್ಟ ಸಮಯಗಳನ್ನು ಕಂಡ ಒಂದು ಕಾಲವಿತ್ತು. ತನ್ನ ವೃತ್ತಿಜೀವನ ಮುಗಿಯಲಿದೆ ಎಂದು ಭಾವಿಸಿದ್ದರು. ಆ ಕಹಿ ಘಟನೆಯನ್ನು ಸ್ವತಃ ಅಮಿತಾಭ್ ಬಚ್ಚನ್ ಅವರೇ ಬಹಿರಂಗಪಡಿಸಿದ್ದಾರೆ.
1990ರ ದಶಕದಲ್ಲಿ ಆಂಗ್ರಿ ಯಂಗ್ ಮ್ಯಾನ್ ದೊಡ್ಡ ಆರ್ಥಿಕ ತೊಂದರೆಯಲ್ಲಿ ಸಿಲುಕಿದರು. ಹಲವು ಕಾನೂನು ಹೋರಾಟಗಳನ್ನು ಎದುರಿಸಬೇಕಾಯಿತು. ಅವರಿಗೆ ತಮ್ಮ ನಟನಾ ವೃತ್ತಿಜೀವನವೂ ಕುಸಿಯುತ್ತಿದೆ ಎಂದು ಭಾಸವಾಗುತಿತ್ತು. ಅಮಿತಾಭ್ ಬಚ್ಚನ್ ಅವರ ಸಂದರ್ಶನದ ವಿಡಿಯೋವೊಂದು ವೈರಲ್ ಆಗುತ್ತಿದೆ. ಅದರಲ್ಲಿ ಅವರು ತನ್ನ ಸಂಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಅದರಲ್ಲಿ ಅಮಿತಾಭ್ ಅವರನ್ನು ನಿಮ್ಮ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತೆ ಎಂದು ಕೇಳಲಾಗುತ್ತದೆ. ಅದಕ್ಕೆ ಉತ್ತರಿಸಿದ ಬಿಗ್ಬಿ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹೇಳಿದರು. ಅವರು 90 ಕೋಟಿ ರೂಪಾಯಿ ಪಾವತಿಸಬೇಕಾಗಿತ್ತು ಮತ್ತು ಅವರ ವಿರುದ್ಧ ಸುಮಾರು 55 ಕಾನೂನು ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಿದ್ದಾರೆ.
ಪ್ರತಿದಿನ ಸಾಲಗಾರರು ತಮ್ಮ ಮನೆ ಬಾಗಿಲಿಗೆ ಬಂದು ನಿಲ್ಲುತ್ತಿದ್ದರು. ಅದು ಅವರಿಗೆ ತುಂಬಾ ಮುಜುಗರ ಮತ್ತು ಅವಮಾನಕರವಾಗಿತ್ತು ಎಂದು ತಿಳಿಸಿದರು. ಅವರ ಕಂಪನಿ ABCL ಮುಚ್ಚಿದ ತಕ್ಷಣ ಅವರ ನಟನಾ ವೃತ್ತಿಜೀವನವೂ ಕೆಳಮುಖವಾಗಲು ಪ್ರಾರಂಭಿಸಿತು. ನಿಮಗೆ ಏನಾದರೂ ತಪ್ಪು ಸಂಭವಿಸಿದಾಗ ನಿಮ್ಮ ಸುತ್ತಲಿನ ಎಲ್ಲವೂ ಅದೇ ರೀತಿಯಲ್ಲಿ ನಡೆಯಲು ಪ್ರಾರಂಭಿಸುತ್ತದೆ. ಜನರು ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಅವರಿಗೆ ನಿನ್ನ ಮುಖ ನೋಡುವುದೂ ಇಷ್ಟವಿರುವುದಿಲ್ಲ ಎಂದು ಅವರು ಹೇಳಿದರು.
ನೀವು ನಟನಲ್ಲ ಅಥವಾ ನೀವು ಮಾಡುತ್ತಿರುವ ಚಲನಚಿತ್ರಗಳು ನೋಡಲು ಯೋಗ್ಯವಲ್ಲ. ನೀವು ಧರಿಸುವ ಬಟ್ಟೆ, ಕಾಣುವ ರೀತಿ ಕೂಡ ಸರಿಯಲ್ಲ ಎಂದು ಜನರು ಭಾವಿಸುತ್ತಾರೆ. ಎಲ್ಲವೂ ತಪ್ಪಾಗುತ್ತದೆ, ಏಕೆಂದರೆ ಜೀವನದಲ್ಲಿ ಏನಾದರೂ ತಪ್ಪಾದಲ್ಲಿ ಎಲ್ಲರೂ ನಿನಗೆ ಎಲ್ಲವೂ ಮುಗಿದಿದೆ ಎಂದು ಹೇಳಲು ಪ್ರಾರಂಭಿಸುತ್ತಾರೆ ಎಂದಿದ್ದಾರೆ.
ಆದರೆ ಅಮಿತಾಭ್ ಬಚ್ಚನ್ ಇದರಿಂದ ಚೇತರಿಸಿಕೊಳ್ಳಲು ಪ್ರಯತ್ನಿಸಿದರು. ಅವರಿಗೆ ಪುನರ್ಜನ್ಮ ಕೊಟ್ಟಿದ್ದು ಟಿವಿ. ಕಾರ್ಯಕ್ರಮ 'ಕೌನ್ ಬನೇಗಾ ಕರೋಡ್‌ಪತಿ' ಎಂದು ತಿಳಿಸಿದರು. ಈ ಕಾರ್ಯಕ್ರಮವನ್ನು ಸುಮಾರು 16 ವರ್ಷಗಳಿಂದ ಆಯೋಜಿಸುತ್ತಿದ್ದಾರೆ. ಆ ಕಾರ್ಯಕ್ರಮ ಎಷ್ಟು ಯಶಸ್ವಿಯಾಯಿತು ಎಂದರೆ ಅವರ ಸ್ಥಗಿತಗೊಂಡ ವೃತ್ತಿಜೀವನವು ಮತ್ತೆ ಓಡಲು ಪ್ರಾರಂಭಿಸಿತು. ಅವರ ವೃತ್ತಿಜೀವನದಲ್ಲಿ ಹೊಸ ಜೀವ ಬಂದಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದರ ಬಳಿಕ ಅವರು ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾದರು (ಏಜೆನ್ಸೀಸ್)