ಭಾರತ-ನೇಪಾಳ ಪಂದ್ಯದಲ್ಲಿ ವಿಶೇಷ ಮೈಲಿಗಲ್ಲು ನೆಡಲಿದ್ದಾರೆ ಕನ್ನಡಿಗ ಜಾವಗಲ್​ ಶ್ರೀನಾಥ್​

srinath web
Published on

ಪಲ್ಲೆಕಿಲೆ: ಮಾಜಿ ವೇಗಿ ಹಾಗೂ ಕನ್ನಡಿಗ ಜಾವಗಲ್​ ಶ್ರೀನಾಥ್​ಗೆ ಭಾರತ-ನೇಪಾಳ ನಡುವಿನ ಕಾದಾಟ, ಐಸಿಸಿ ಮ್ಯಾಚ್​ ರೆಫ್ರಿಯಾಗಿ 250ನೇ ಪಂದ್ಯ ಆಗಿರಲಿದೆ. ರಂಜನ್​ ಮದುಗಲೆ, ಕ್ರಿಸ್​ ಬ್ರಾಡ್​ ಮತ್ತು ಜೆಫ್​ ಕ್ರೋವ್​ ಬಳಿಕ ಈ ಸಾಧನೆ ಮಾಡಿದ 4ನೇ ರೆಫ್ರಿ ಎನಿಸಲಿದ್ದಾರೆ.

"ಮ್ಯಾಚ್​ ರೆಫ್ರಿಯಾಗಿ ಈ ಮೈಲಿಗಲ್ಲು ನೆಡುತ್ತಿರುವುದು ವಿಶೇಷವಾಗಿದೆ. ಕಳೆದ 17 ವರ್ಷಗಳಿಂದ ಈ ಕೆಲಸ ನಿರ್ವಹಿಸುತ್ತಿರುವೆ. ನಾನು ಆಡಿರುವುದಕ್ಕಿಂತ ಹೆಚ್ಚಿನ ಏಕದಿನ ಪಂದ್ಯಗಳಲ್ಲಿ ಈಗ ಮ್ಯಾಚ್​ ರೆಫ್ರಿಯಾಗಿ ಕಾರ್ಯನಿರ್ವಹಿಸಿರುವೆ ಎಂಬುದು ನಿಜಕ್ಕೂ ನಂಬಲಸಾಧ್ಯ' ಎಂದು 54 ವರ್ಷದ ಜಾವಗಲ್​ ಶ್ರೀನಾಥ್​ ತಿಳಿಸಿದ್ದಾರೆ. ಅವರು ಭಾರತ ತಂಡದ ಪರ 67 ಟೆಸ್ಟ್​, 229 ಏಕದಿನ ಪಂದ್ಯ ಆಡಿದ್ದಾರೆ.

"ಈ ಕೆಲಸದೊಂದಿಗೆ ಈಗಲೂ ಕ್ರಿಕೆಟ್​ ಆಟದೊಂದಿಗೆ ಸಂಬಂಧ ಮುಂದುವರಿಸಿರುವುದು ನನ್ನ ಭಾಗ್ಯ. 2006ರಲ್ಲಿ ಶ್ರೀಲಂಕಾ&ದಣ ಆಫ್ರಿಕಾ ನಡುವೆ ಕೊಲಂಬೊದಲ್ಲಿ ನಡೆದ ಟೆಸ್ಟ್​ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಮ್ಯಾಚ್​ ರೆಫ್ರಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದೆ. ಮುಂಬರುವ ದಿನಗಳಲ್ಲೂ ಸಾಧ್ಯವಾದಷ್ಟು ಕಾಲ ಈ ಕೆಲಸದಲ್ಲಿ ಮುಂದುವರಿಯಲು ಬಯಸಿರುವೆ' ಎಂದು ಶ್ರೀನಾಥ್​ ತಿಳಿಸಿದ್ದಾರೆ. ಅವರು ಇದುವರೆಗೆ 65 ಟೆಸ್ಟ್​, 118 ಟಿ20 ಮತ್ತು 16 ಮಹಿಳಾ ಟಿ20 ಪಂದ್ಯಗಳಲ್ಲೂ ಮ್ಯಾಚ್​ ರೆಫ್ರಿಯಾಗಿದ್ದಾರೆ. 2007ರ ಏಕದಿನ ವಿಶ್ವಕಪ್​, 2009, 2013ರ ಚಾಂಪಿಯನ್ಸ್​ ಟ್ರೋಫಿ, 2012, 2014, 2016, 2021ರ ಟಿ20 ವಿಶ್ವಕಪ್​ಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net