ನವದೆಹಲಿ: ಸಿಡ್ನಿ ಟೆಸ್ಟ್ ವೇಳೆ ಬೆನ್ನುನೋವಿನ ಸಮಸ್ಯೆ ಎದುರಿಸಿರುವ ವೇಗಿ ಜಸ್ಪ್ರೀತ್ ಬುಮ್ರಾ ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಕ್ರಿಕೆಟ್ ಸರಣಿಯ ಹೆಚ್ಚಿನ ಪಂದ್ಯಗಳನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಂಪೂರ್ಣ ಫಿಟ್ ಆಗುವುದಕ್ಕಾಗಿ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಇದಲ್ಲದೆ ಚಾಂಪಿಯನ್ಸ್ ಟ್ರೋಫಿಗೆ ಅವರು ಭಾರತ ತಂಡದ ಉಪನಾಯಕರಾಗಿ ನೇಮಕವಾಗುವ ನಿರೀಕ್ಷೆಯೂ ಇದೆ.
ಬಿಜಿಟಿ ಸರಣಿಯಲ್ಲಿ 150ಕ್ಕೂ ಅಧಿಕ ಓವರ್ ಬೌಲಿಂಗ್ ಮಾಡಿದ್ದ ಬುಮ್ರಾ 32 ವಿಕೆಟ್ ಕಬಳಿಸಿದ್ದರು. ಬೆನ್ನುನೋವಿನಿಂದಾಗಿ ಸರಣಿಯ ಕೊನೇ ಇನಿಂಗ್ಸ್ನಲ್ಲಿ ಅವರು ಬೌಲಿಂಗ್ ಮಾಡಿರಲಿಲ್ಲ. ಹೀಗಾಗಿ ಅವರ ಕಾರ್ಯದೊತ್ತಡ ತಗ್ಗಿಸಲು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಎಲ್ಲ ಪಂದ್ಯಗಳಲ್ಲಿ ಆಡಿಸುವ ಸಾಧ್ಯತೆ ಇಲ್ಲ. ಇದು ವಿಶ್ವಕಪ್ ವರ್ಷ ಅಲ್ಲದ ಕಾರಣ ಬುಮ್ರಾ ಟಿ20 ಸರಣಿಯಲ್ಲಿ ಆಡುವುದಿಲ್ಲ. ಆದರೆ ಚಾಂಪಿಯನ್ಸ್ ಟ್ರೋಫಿಗೆ ಪೂರ್ವಸಿದ್ಧತೆಯಾಗಿ ಏಕದಿನ ಸರಣಿಯಲ್ಲಿ ಒಂದೆರಡು ಪಂದ್ಯ ಆಡಬಹುದು. ಸರಣಿಯ ಕೊನೇ ಪಂದ್ಯ ಫೆ.12ರಂದು ಅಹಮದಾಬಾದ್ನಲ್ಲಿ ನಡೆಯಲಿದ್ದು, ಇದು ಬುಮ್ರಾರ ತವರು ನೆಲ ಆಗಿರುವುದರಿಂದ ಅಲ್ಲಿ ಆಡಿಸಬಹುದು ಎನ್ನಲಾಗಿದೆ.
ಬುಮ್ರಾ ಗಾಯದ ಗಂಭೀರತೆ ಅಸ್ಪಷ್ಟ
ಬುಮ್ರಾರ ಬೆನ್ನುನೋವಿನ ಗಂಭೀರತೆ ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಅವರ ಬೆನ್ನು ಸೆಳೆತ ಗ್ರೇಡ್-1 ಗಾಯವಾಗಿದ್ದರೆ, ಕನಿಷ್ಠ 2ರಿಂದ 3 ವಾರಗಳ ಪುನಶ್ಚೇತನ ಬೇಕಾಗುತ್ತದೆ. ಗ್ರೇಡ್-2 ಇಂಜುರಿ ಆಗಿದ್ದರೆ 6 ವಾರಗಳು ಬೇಕಾಗುತ್ತದೆ. ಗ್ರೇಡ್-3 ಆಗಿದ್ದರೆ ಗಂಭೀರವೆನಿಸಲಿದ್ದು, 3 ವಾರಗಳ ವಿಶ್ರಾಂತಿ ಮತ್ತು ಪುನಶ್ಚೇತನ ಅಗತ್ಯವಾಗಿರುತ್ತದೆ.
ಟ್ರೋಫಿ ವಿತರಣೆಗೆ ಆಹ್ವಾನಿಸದ ಬಗ್ಗೆ ಗಾವಸ್ಕರ್ ಬೇಸರ; ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟನೆ ಹೀಗಿದೆ…