

Resigns: ಹಠಾತ್ ರಾಜಕೀಯ ಬೆಳವಣಿಗೆಯಲ್ಲಿ ಜಪಾನ್ ಪ್ರಧಾನಿ ಶಿಗೇರು ಇಶಿಬಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಘೋಷಿಸಿದ್ದಾರೆ ಎಂದು ರಾಯಿಟರ್ಸ್ ಭಾನುವಾರ (ಸೆ. 09) ವರದಿ ಮಾಡಿದೆ.
ಆಡಳಿತರೂಧ ಎಲ್ಡಿಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿದ್ದು, ಪಕ್ಷ ವಿಭಜನೆಯನ್ನು ತಡೆಗಟ್ಟಲು ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇಶಿಬಾ ಅಧಿಕಾರ ವಹಿಸಿಕೊಂಡಾಗಿನಿಂದ ಜುಲೈನಲ್ಲಿ ಎಲ್‌ಡಿಪಿಯ ಮೇಲ್ಮನೆ ಸೇರಿದಂತೆ ಹಲವಾರು ಚುನಾವಣಾ ಸೋಲುಗಳನ್ನು ಎದುರಿಸಿದ್ದಾರೆ. ಇದು ಪಕ್ಷದಲ್ಲಿ ಅವರ ಬಗ್ಗೆ ವಿರೋಧಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಅಕ್ಟೋಬರ್‌ನಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಇಶಿಬಾ ಅವರ ಆಡಳಿತದಲ್ಲಿ ಎಲ್‌ಡಿಪಿ ಮತ್ತು ಅದರ ಪಾಲುದಾರ ಒಕೊಮಿಟೊ ಪಕ್ಷಗಳು ಎರಡೂ ಸದನಗಳಲ್ಲಿ (ಲೋವರ್ ಹೌಸ್ ಮತ್ತು ಅಪರ್ ಹೌಸ್) ಬಹುಮತವನ್ನು ಕಳೆದುಕೊಂಡಿವೆ. ಜುಲೈನಲ್ಲಿ ನಡೆದ ಅಪರ್ ಹೌಸ್ ಚುನಾವಣೆಯಲ್ಲಿ 141 ಸ್ಥಾನಗಳಿಂದ 122 ಸ್ಥಾನಗಳಿಗೆ ಕುಸಿದಿದೆ. ಇದು ಎಲ್‌ಡಿಪಿಯ ಇತಿಹಾಸದಲ್ಲಿ ಎರಡನೇ ಕೆಟ್ಟ ಫಲಿತಾಂಶವಾಗಿದೆ.
ರಾಜೀನಾಮೆ ಕುರಿತು ಮಾತನಾಡಿರುವ ಇಶಿಬಾ, "ಅಮೆರಿಕಾದೊಂದಿಗಿನ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಿ, ಅಧ್ಯಕ್ಷರ ಸಹಿ ಪಡೆದ ನಂತರ ನಾವು ಪ್ರಮುಖ ಅಡಚಣೆಯನ್ನು ಮೀರಿದ್ದೇವೆ. ನಾನು ಅಧಿಕಾರವನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸಲು ಬಯಸುತ್ತೇನೆ ಎಂದು ಭಾವೋದ್ವೇಗದಿಂದ ಹೇಳಿದ್ದಾರೆ.
ಇಶಿಬಾ ರಾಜೀನಾಮೆ ನೀಡಿದ ಬಳಿಕ ಮುಂದೆ ಯಾರು ಪ್ರಧಾನಿ ಆಗುತ್ತಾರೆ ಎಂಬ ಚರ್ಚೆ ನಡೆದಿದೆ. ಕಳೆದ ವರ್ಷದ ಪಕ್ಷದ ನಾಯಕತ್ವದ ಚುನಾವಣೆಯಲ್ಲಿ ಇಶಿಬಾ ವಿರುದ್ಧ ಸ್ವಲ್ಪ ಅಂತರದಿಂದ ಸೋತಿದ್ದ ಸನೇ ತಕೈಚಿ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಮತ್ತೊಬ್ಬರು ಮಾಜಿ ಪ್ರಧಾನಿಯವವರ ಪುತ್ರ, ಕೃಷಿ ಸಚಿವ ಶಿಂಜಿರೋ ಕೊಯಿಜುಮಿ ಹೆಸರು ಬರುತ್ತಿದೆ. (ಏಜೆನ್ಸೀಸ್)