ರಾಖಿ ಕಟ್ಟಿದ ಬಳಿಕ ಹಣ ಕೊಡಲು ಬಂದ ಅಭಿಮಾನಿಗೆ ನಟಿ ಜಾಹ್ನವಿ ಕೊಟ್ಟ ಪ್ರತಿಕ್ರಿಯೆ ವೈರಲ್​!

Jahnavi Kapoor
Published on

ಮುಂಬೈ: ನಿನ್ನೆಯಷ್ಟೇ (ಆ.19) ಇಡೀ ದೇಶ ರಕ್ಷಾ ಬಂಧನ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದೆ. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಶುಭವಾಗಲಿ ಎಂದು ಹಾರೈಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಹೋದರರು ಉಡುಗೊರೆಗಳನ್ನು ನೀಡುವ ಮೂಲಕ ಸಹೋದರತ್ವ ಬಂಧವನ್ನು ಬಿಗಿಗೊಳಿಸಿದ್ದಾರೆ.

ರಕ್ಷಾ ಬಂಧನಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ನಿನ್ನೆಯಿಂದಲೂ ವೈರಲ್​ ಆಗುತ್ತಿದೆ. ಇವುಗಳ ನಡುವೆ ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್‌ಗೆ ಸಂಬಂಧಿಸಿದ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಜಾನ್ವಿಯ ಸರಳತೆಯನ್ನು ಕಂಡು ನೆಟ್ಟಿಗರು ಬಹುಪರಾಕ್​ ಹೇಳಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಚಿತ್ರವೊಂದರ ಶೂಟಿಂಗ್​ಗೆಂದು ಜಾಹ್ನವಿ ಮುಂಬೈನ ಸ್ಟುಡಿಯೋಗೆ ಬಂದಿದ್ದರು. ಈ ವೇಳೆ ಅಭಿಮಾನಿಯೊಬ್ಬ ಅವರ ಮುಂದೆ ಎದುರಾಗಿ ರಾಖಿ ಕಟ್ಟುವಂತೆ ಮನವಿ ಮಾಡಿಕೊಂಡನು. ಅಭಿಮಾನಿ ತೆಗದುಕೊಟ್ಟ ರಾಖಿಯನ್ನು ಪ್ರೀತಿಯಿಂದ ತೆಗೆದುಕೊಂಡು ಜಾನ್ವಿ ಆತನ ಕೈಗೆ ಕಟ್ಟಿ, ಶುಭ ಹಾರೈಸಿದರು. ಬಳಿಕ ಅಭಿಮಾನಿ ಪ್ಯಾಂಟ್​ ಜೇಬಿಗೆ ಕೈಹಾಕಿ ಹಣವನ್ನು ತೆಗೆದು ಉಡುಗೊರೆಯಾಗಿ ನೀಡಲು ಯತ್ನಿಸಿದರು. ಆದರೆ, ಹಣವನ್ನು ಬೇಡ ಎಂದು ಟಾಟಾ ಮಾಡಿ, ಮುಗಳ್ನಕ್ಕು ಸ್ಟುಡಿಯೋ ಒಳಗೆ ಜಾಹ್ನವಿ ಹೋದರು. ಅಭಿಮಾನಿ ಕೂಡ ನಗುತ್ತಾ ಅಲ್ಲಿಂದ ಹೊರಟರು. ಇದಿಷ್ಟು ದೃಶ್ಯ ವಿಡಿಯೋದಲ್ಲಿದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಜಾಹ್ನವಿ ಕಪೂರ್​ ಸರಳತೆಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ಮಹಾಪೂರವನ್ನು ಹರಿಸಿದ್ದಾರೆ. ಅಭಿಮಾನಿಯ ಮನವಿಗೆ ಜಾಹ್ನವಿ ಸ್ಪಂದಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಇತ್ತೀಚೆಗಷ್ಟೇ ಜಾಹ್ನವಿ ನಟನೆಯ ತೆಲುಗಿನ 'ದೇವರ' ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದೇವರ ಚಿತ್ರದಲ್ಲಿ ಜಾಹ್ನವಿ ಅವರು ಜೂ.ಎನ್​ಟಿಆರ್​ಗೆ ನಾಯಕಿಯಾಗಿದ್ದಾರೆ. ರಾಮ್​ಚರಣ್​ ನಟನೆಯ ಇನ್ನು ಹೆಸರಿಡದ ಚಿತ್ರಕ್ಕೂ ಜಾಹ್ನವಿ ನಾಯಕಿಯಾಗಿದ್ದಾರೆ. ಹಿಂದಿ ಸಿನಿಮಾವೊಂದರಲ್ಲೂ ಜಾಹ್ನವಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net