

ತಿರುವನಂತಪುರಂ: ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ಕಲಾವಿದರ ಸ್ಥಿತಿಗತಿಗಳ ಕುರಿತು ಸರ್ಕಾರಕ್ಕೆ ಹೇಮಾ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಆಘಾತಕಾರಿ ಮಾಹಿತಿಗಳು ಬಹಿರಂಗವಾಗಿದೆ. ಈ ವರದಿಯ ಪ್ರಕಾರ ಕೆಲ ಪ್ರೊಡಕ್ಷನ್ ಕಂಟ್ರೋಲರ್ಗಳು ಉನ್ನತ ಸ್ಥಾನದಲ್ಲಿರುವ ನಟರು, ನಿರ್ದೇಶಕರು ಮತ್ತು ನಿರ್ಮಾಪಕರ ಬಳಿಗೆ ಮಹಿಳೆಯರನ್ನು ಕರೆತಂದು ಬಿಡುವ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದು, ಸಾಕಷ್ಟು ಹೆಣ್ಣು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.
ಪ್ರಸ್ತುತ ಸಿನಿಮಾ ಶೂಟಿಂಗ್ ಪರಿಸ್ಥಿತಿ ಹೇಗಿದೆ ಅಂದರೆ, ಕೆಲವು ಸ್ಥಳಗಳಿಗೆ ಹೋದಾಗ ಕಲಾವಿದೆಯರು ತಮ್ಮೊಂದಿಗೆ ಪಾಲಕರನ್ನು ಕರೆದುಕೊಂಡು ಹೋಗಬೇಕಾಗುತ್ತದೆ. ನಟಿಯರು ಡ್ರೆಸ್ಸಿಂಗ್ ರೂಮ್ನಲ್ಲಿ ಇರುವಾಗ ದಿಢೀರನೇ ಬಾಗಿಲು ತಟ್ಟುವುದು ಸಾಮಾನ್ಯವಾಗಿದೆ. ಒಂದು ವೇಳೆ ಬಾಗಿಲ ತೆರಯದಿದ್ದರೆ ಬಾಗಿಲು ಬಲವಾಗಿ ಬಡಿಯುತ್ತಾರೆ ಮತ್ತು ಬಾಗಿಲನ್ನು ಒಡೆದು ಒಳಗೆ ಬಂದುಬಿಡುತ್ತಾರೇನೋ ಎಂದು ಹೆದರುತ್ತೇವೆ ಎಂದು ಕೆಲ ನಟಿಯರು ಬಹಿರಂಗಪಡಿಸಿದ್ದಾರೆ.
ವರದಿಯ ಪ್ರಕಾರ, ಅನೇಕ ಕಲಾವಿದೆಯರು ಶೋಷಣೆಗೆ ಒಳಗಾಗದರೂ ಜೀವ ಭಯದಿಂದ ದೂರು ನೀಡುವುದಿಲ್ಲ. ಏಕೆಂದರೆ, ಧ್ವನಿ ಎತ್ತಿದರೆ ಅವರ ವಿರುದ್ಧ ಸೈಬರ್ ದಾಳಿ ಕೂಡ ನಡೆಯುತ್ತದೆ. ಕೆಲವು ನಟಿಯರು ಜೀವಭಯದಿಂದಲೇ ಹೇಮಾ ಸಮಿತಿಯ ಮುಂದೆ ಹೇಳಿಕೆ ನೀಡಿದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ನಟಿಯರ ಮೇಲೆ ಹಲ್ಲೆ ಮಾಡುವಂತಹ ಘಟನೆಗಳು ಮಲಯಾಳಂ ಚಿತ್ರರಂಗದಲ್ಲಿ ಹೊಸದೇನಲ್ಲ. ಬೆರಣಿಕೆಯಷ್ಟು ಪ್ರಕರಣಗಳು ವರದಿಯಾದರೆ, ಜೀವ ಭಯದಿಂದ ವರದಿಯಾಗದ ಎಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ವರದಿಯಲ್ಲಿ ನಟಿಯರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಆದರೆ, ನಟಿಯರ ರಕ್ಷಣೆಯ ದೃಷ್ಟಿಯಿಂದ ವರದಿಯಲ್ಲಿ ನಟಿಯರ ಹೆಸರನ್ನು ಉಲ್ಲೇಖಿಸಲಾಗಿಲ್ಲ.
ಜೂನಿಯರ್ ಆರ್ಟಿಸ್ಟ್ಗಳು ಸಹ ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಕೆಲವು ಮಹಿಳೆಯರಿಗೆ ಮೂಲಭೂತ ಸೌಕರ್ಯಗಳು ಸಹ ಇಲ್ಲ. ಶೌಚಾಲಯ ಬಳಸಲು ಸಾಧ್ಯವಾಗದೇ ಇದ್ದಾಗ ಮೂತ್ರ ನಿಯಂತ್ರಿಸಲು ನೀರು ಕುಡಿಯದೇ ಕುಳಿತುಕೊಳ್ಳುತ್ತಾರೆ. ಹೀಗಾಗಿ ಸಾಕಷ್ಟು ಆಘಾತಕಾರಿ ಸಂಗತಿಯನ್ನು ನ್ಯಾಯಾಧೀಶೆ ಹೇಮಾ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. (ಏಜೆನ್ಸೀಸ್)