

ಬೆಂಗಳೂರು: ಕರೊನಾ ವೈರಸ್ ಸೋಂಕು ತಡೆಗೆ ಇಂದು ಇಡಿ ದೇಶ ಒಂದಾಗಿ ಜನತಾ ಕರ್ಫ್ಯೂ ಆಚರಿಸುತ್ತಿದ್ದು ಕೊನೆಗೊಳ್ಳಲು ಇನ್ನು ಕೆಲವೇ ಗಂಟೆ ಬಾಕಿ ಇದೆ. ಸಂಜೆ 5 ಗಂಟೆಗೆ 5 ನಿಮಿಷ ಘಂಟಾ ನಾದ, ಚಪ್ಪಾಳೆ ತಟ್ಟುವ ಮೂಲಕ ಕರೊನಾ ಸಮರ ಸೇನಾನಿಗಳ ಕೆಲಸವನ್ನು ಗೌರವಿಸಿದೆ. ಇದರ ಬೆನ್ನಲ್ಲೆ ಈ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಜನತಾ ಕರ್ಫ್ಯೂ ರಾತ್ರಿ 9ಕ್ಕೆ ಮುಗಿಯುತ್ತಲೇ ಸಂಭ್ರಮಿಸಬೇಡಿ ಎಂದು ಎಚ್ಚರಿಸಿದ್ದಾರೆ.
ಅವರ ಟ್ವೀಟ್ ಸಂದೇಶದ ಸಾರ ಹೀಗಿದೆ - ಇದು ಧನ್ಯವಾದದ ನಾದ. ಅಷ್ಟೇ ಅಲ್ಲ ಒಂದು ದೀರ್ಘ ಹೋರಾಟದ ಗೆಲುವಿನ ಆರಂಭಕ್ಕೆ ಮುನ್ನುಡಿ ಬರೆದ ನಾದವೂ ಹೌದು. ಬನ್ನಿ ಈ ಸಂಕಲ್ಪದ ಜತೆಗೆ, ಸಂಯಮದೊಂದಿಗೆ ಒಂದು ದೊಡ್ಡ ಹೋರಾಟದಲ್ಲಿ ನಿಮ್ಮನ್ನು ನೀವು ಬಂಧನಕ್ಕೆ (Social Distancing) ಒಳಪಡಿಸಿಕೊಳ್ಳಿ. ಕರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಪ್ರತಿಯೊಬ್ಬ ವ್ಯಕ್ತಿಗೂ ದೇಶ ಒಂದೇ ಮನಸ್ಸಿನೊಂದಿಗೆ ಧನ್ಯವಾದ ಹೇಳಿದೆ. ದೇಶವಾಸಿಗಳಿಗೆ ಬಹಳ ಬಹಳ ಆಭಾರಿಯಾಗಿದ್ದೇನೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ನಿರ್ದೇಶನಗಳನ್ನು ಎಲ್ಲರೂ ಜರೂರಾಗಿ ಪಾಲಿಸಬೇಕು. ಎಲ್ಲೆಲ್ಲಿ ಅಂದರೆ ಯಾವ ರಾಜ್ಯ, ಜಿಲ್ಲೆಗಳಲ್ಲಿ ಲಾಕ್ ಡೌನ್ ಇದೆಯೋ ಅಲ್ಲೆಲ್ಲ ಯಾರೂ ಮನೆ ಬಿಟ್ಟು ಹೊರಗೆ ಬರಬೇಡಿ. ಬೇರೆ ಯಾವುದೇ ವಿಚಾರದಲ್ಲೂ ಅನಿವಾರ್ಯ ಕಾರಣದ ಹೊರತು ಬೀದಿಗೆ ಇಳಿಯಬೇಡಿ.
ಇವತ್ತಿನ #JantaCurfew ಇಂದು ರಾತ್ರಿ 9ಕ್ಕೆಲ್ಲ ಮುಗಿದು ಹೋಗುತ್ತದೆ. ಇದರ ಅರ್ಥ ನಾವೆಲ್ಲ ಸೆಲೆಬ್ರೇಷನ್ ಶುರು ಮಾಡೋಣ ಎಂದಲ್ಲ. ಇಂದಿನ ಈ ಕೆಲಸವನ್ನು ಯಶಸ್ಸು ಎಂದು ಪರಿಗಣಿಸಬೇಡಿ. ಇದು ಒಂದು ಸುದೀರ್ಘವಾದ ಹೋರಾಟದ ಆರಂಭ. ಇಂದು ದೇಶವಾಸಿಗಳೆಲ್ಲ ಒಟ್ಟಾಗಿ ಒಂದು ಸಂದೇಶ ಸಾರಿದ್ದೇವೆ. ನಾವು ಒಂದು ನಿರ್ಣಯ ತೆಗೆದುಕೊಂಡರೆ, ಸಂಕಲ್ಪ ಮಾಡಿದರೆ ಅದನ್ನು ಸಾಕಾರಗೊಳಿಸುವಷ್ಟು ಸಮರ್ಥರಿದ್ದೇವೆ ಎಂಬ ಸಂದೇಶವದು..