

ಬಳ್ಳಾರಿ: ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗುತ್ತಿದ್ದಂತೆಯೇ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಹೊಸ ಸಂಕಷ್ಟ ಶುರುವಾಗಿದೆ. ಅವರಿಗೆ ಮಾತ್ರವಲ್ಲ, ಅವರ ಸಹೋದರ ಸೋಮಶೇಖರ ರೆಡ್ಡಿ ಅವರಿಗೂ ಈ ಹೊಸ ಸಂಕಷ್ಟ ಸುತ್ತಿಕೊಳ್ಳತೊಡಗಿದೆ.
ರೆಡ್ಡಿ ಸಹೋದರರ ವಿರುದ್ಧ ಇರುವ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಹೋಗಿದೆ. 2010ರಲ್ಲಿ ಬಳ್ಳಾರಿಯಲ್ಲಿ ನಡೆದ ಪಾಲಿಕೆ ಸದಸ್ಯೆ ಪದ್ಮಾವತಿ ಯಾದವ್ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಬೇಡಿಕೆ ಆ ಪತ್ರದಲ್ಲಿ ಇದೆ.
ಕೊಲೆಯಾದ ಪಾಲಿಕೆ ಸದಸ್ಯೆ ಪದ್ಮಾವತಿ ಯಾದವ್ ಅವರ ಸಹೋದರ ಸುಬ್ಬಾರಾಯುಡು ಅವರು ಡಿ. 1ರಂದು ಈ ಪತ್ರ ಬರೆದಿದ್ದಾರೆ. ಕೊಲೆ ಪ್ರಕರಣ ಸಂಭವಿಸಿ 12 ವರ್ಷಗಳು ಕಳೆದರೂ ಕಾನೂನು ಹೋರಾಟವನ್ನು ಪದ್ಮಾವತಿ ಸಹೋದರ ಬಿಟ್ಟಿಲ್ಲ. ಈ ಪತ್ರದಲ್ಲಿ ಅವರು ಜನಾರ್ದನ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಮೇಲೆ ಗಂಭೀರ ಆರೋಪವನ್ನೇ ಮಾಡಿದ್ದಾರೆ.
ಆರೋಪಿತರು ಪತ್ತೆ ಆಗಿಲ್ಲವೆಂದು ಸಿಐಡಿ 2015ರಲ್ಲಿ ಬಳ್ಳಾರಿ ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿತ್ತು. ಪ್ರಕರಣದ ತನಿಖೆಯಲ್ಲಿ ತಮ್ಮ ಹೇಳಿಕೆ ಪಡೆಯದೆ ಸಿಐಡಿಯಿಂದ ಸಿ ವರದಿ ಸಲ್ಲಿಕೆಯಾಗಿದೆ ಎಂಬುದು ಸುಬ್ಬರಾಯುಡು ಆರೋಪ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ಹೈಕೋರ್ಟ್ ಕದತಟ್ಟಿದ್ದರು ಸುಬ್ಬರಾಯುಡು. ಧಾರವಾಡದ ಯೋಗೇಶ ಗೌಡ ಕೊಲೆ ಪ್ರಕರಣದಂತೆ ಪದ್ಮಾವತಿ ಕೊಲೆ ಪ್ರಕರಣವನ್ನೂ ಪರಿಗಣಿಸುವಂತೆ ಮನವಿ ಮಾಡಿದ್ದರು.
ಇದೀಗ ಪ್ರಕರಣವನ್ನು ಸಿಬಿಐಗೆ ವಹಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳುವಂತೆ ಹೋರಾಟ ಆರಂಭಿಸಿದ್ದಾರೆ. ತಮಗೆ ಪ್ರಾಣಹಾನಿಯಾದರೆ ಜನಾರ್ದನ ರೆಡ್ಡಿ ಮತ್ತು ಸೋಮಶೇಖರ ರೆಡ್ಡಿ ಅವರೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಎ 1 ಜನಾರ್ದನ ರೆಡ್ಡಿ, ಮಾಜಿ ಎಎಸ್ಪಿ ಕುರಾರೆ ಎ2 ಆರೋಪಿ. ಪತ್ರದಲ್ಲಿ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಮೇಲೆಯೂ ಸುಬ್ಬರಾಯುಡು ಗಂಭೀರ ಆರೋಪ ಮಾಡಿದ್ದಾರೆ.