‘ಜೇಮ್ಸ್​’ ಸಿನಿಮಾ ಟಿಕೆಟ್ಸ್ ಸೋಲ್ಡ್​ಔಟ್? ಮೊದಲ ದಿನವೇ ಊಹೆಗೆ ಮೀರಿದ ಕಲೆಕ್ಷನ್!?

Published on
ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್ ಮೇಲೆ ಅವರ ಕಟ್ಟಾಭಿಮಾನಿಗಳಿಗೆ ಇರುವ ಅಭಿಮಾನ, ಪ್ರೀತಿ, ಅಕ್ಕರೆ ಅಷ್ಟಿಷ್ಟಲ್ಲ. ಅಪ್ಪು ನಿಧನರಾದಾಗಿನಿಂದ ಇಂದಿನವೆರೆಗೆ ಅಭಿಮಾನಿಗಳು ಅವರ ಅಭಿಮಾನವನ್ನು, ಹುಚ್ಚು ಪ್ರೀತಿಯನ್ನು ಸಾಧ್ಯವಾದ ಎಲ್ಲಾ ರೀತಿಯಲ್ಲಿ ತೋರಿಸುತ್ತಲೇ ಬಂದಿದ್ದಾರೆ. ಇನ್ನು, ಮಾರ್ಚ್​ 17ಕ್ಕೆ ಅಪ್ಪು ಅವರು ಹೀರೋ ಆಗಿ ಅಭಿನಯಿಸಿರುವ ಕೊನೆಯ ಸಿನಿಮಾ ‘ಜೇಮ್ಸ್’ ರಿಲೀಸ್ ಆಗಲಿದ್ದು, ಪುನೀತ್ ಅಭಿಮಾನಿಗಳು ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಕೊನೆಯ ಬಾರಿ ಈ ಸಿನಿಮಾದ ಮೂಲಕ ಅಪ್ಪು ಅವರನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಹಾಗೂ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಲು ಫ್ಯಾನ್ಸ್​ಗಳು ಕಾದು ಕುತಿದ್ದಾರೆ.
ಹೀಗಾಗಿ, ಸಿನಿಮಾ ರಿಲೀಸ್ ಆಗುವ 6 ದಿನಗಳ ಮುಂದೆಯೇ ಚಿತ್ರಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್ ಅವಕಾಶವನ್ನು ‘ಜೇಮ್ಸ್’ ಚಿತ್ರತಂಡ ನೀಡಿತ್ತು. ‘ಜೇಮ್ಸ್​’ ತೆರೆಕಾಣುವುದಕ್ಕೂ ಒಂದು ವಾರ ಮೊದಲೇ ಸಿನಿಮಾದ ಪ್ರೀ-ಬುಕಿಂಗ್​ ಆರಂಭಗೊಂಡಿದ್ದು, 'ಬುಕ್ ಮೈ ಶೋ' ಆ್ಯಪ್ ಮೂಲಕ ಆನ್​ಲೈನ್​ನಲ್ಲಿ ಟಿಕೆಟ್​​ಗಳನ್ನು ಮಾರಾಟ ಮಾಡಲಾಗುತ್ತಿದೆ. ಇನ್ನು, ಅಂದು ಮುಂಜಾನೆ 6 ಗಂಟೆಗೆ ‘ಜೇಮ್ಸ್’ನ ವಿಶೇಷ ಶೋ ಏರ್ಪಡಿಸಲಾಗಿದ್ದು, ಆ ಸಮಯದಲ್ಲಿ ಅಪ್ಪು ಅವರನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ ಎಂದರೇ ತಪ್ಪಾಗುವುದಿಲ್ಲ.
6 ಗಂಟೆಗೆ ಶೋಗೆ ಬೇಡಿಕೆ ಹೆಚ್ಚಾಗಿದ್ದು, ಪರಿಣಾಮ ಅನೇಕ ಥಿಯೇಟರ್​ಗಳಲ್ಲಿ 6 ಗಂಟೆ ಶೋಗಳಿಗೆ ಈಗಾಗಲೇ ಟಿಕೆಟ್​ಗಳು ಸೋಲ್ಡ್​ಔಟ್ ಆಗಿವೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿ 6 ಗಂಟೆಗೆ 200ಕ್ಕೂ ಹೆಚ್ಚು ಶೋಗಳ ಟಿಕೆಟ್​ಗಳನ್ನು ಮಾರಾಟಕ್ಕೆ ಇಡಲಾಗಿದ್ದು, ಇದರಲ್ಲಿ ಅನೇಕ ಶೋಗಳ ಟಿಕೆಟ್​ಗಳು ಸೋಲ್ಡ್​ಔಟ್ ಆಗಿದೆ ಎಂದು ಆ್ಯಪ್​ನಲ್ಲಿ ಗೊತ್ತಾಗುತ್ತಿದೆ. ಉಳಿದ ಕೆಲ ಥಿಯೇಟರ್​ಗಳಲ್ಲಿ ಶೋಗಳ ಟಿಕೆಟ್​ಗಳು ಫಿಲ್ಲಿಂಗ್ ಫಾಸ್ಟ್ ಎಂದು ತೋರಿಸುತ್ತಿದೆ. ಕರ್ನಾಟಕದಾದ್ಯಂತ ಶೇ.80 ಚಿತ್ರಮಂದಿರಗಳಲ್ಲಿ 'ಜೇಮ್ಸ್' ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಇದರಿಂದ ಈ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡುವ ಸೂಚನೆ ಕಾಣುತ್ತಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net