

ದೇವದುರ್ಗ: ನಾರಾಯಣಪುರ ಬಲದಂಡೆ ಕಾಲುವೆಗೆ ನೀರು ಹರಿಸಲು ಅವೈಜ್ಞಾನಿಕ ವಾರಬಂದಿ ಪದ್ಧತಿ ಜಾರಿಗೊಳಿಸಿರುವುದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕಾಲುವೆ ನೀರು ಬಳಕೆದಾರರ ಸಂಘದ ನೇತೃತ್ವದಲ್ಲಿ ರೈತರು ತಾಲೂಕಿನ ಜಾಲಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.
ವಾರಬಂದಿ ಪದ್ಧತಿ ಜಾರಿಗೊಳಿಸಿರುವುದು ಅವೈಜ್ಞಾನಿಕ ಕ್ರಮ. ಈ ಹಿಂದೆ ಮುಂಗಾರು ಬೆಳೆಗೆ ವಾರಬಂದಿ ಪದ್ಧತಿ ಜಾರಿಗೊಳಿಸಿರಲಿಲ್ಲ. ನಾರಾಯಣಪುರ ಜಲಾಶಯ ಹಾಗೂ ಆಲಮಟ್ಟಿ ಡ್ಯಾಂ ಸೇರಿ ಸುಮಾರು 100ಟಿಎಂಸಿ ಅಡಿಗೂ ಅಧಿಕ ನೀರಿನ ಸಂಗ್ರಹವಿದ್ದರೂ ವಾರಬಂದಿ ಹಾಕಿರುವುದು ಖಂಡನೀಯ. ಮುಖ್ಯನಾಲೆ ಆಧುನೀಕರಣ ಹಾಗೂ ಉಪಕಾಲುವೆಗಳ ನವೀಕರಣಕ್ಕೆ ಸಾವಿರಾರು ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ಹಲವು ಕಡೆ ಕಳಪೆ ಕಾಮಗಾರಿಯಿಂದ ಕಾಲುವೆ ಕಿತ್ತುಹೋಗಿವೆ. ಇದರಿಂದ ಕೊನೇ ಭಾಗದ ರೈತರ ಜಮೀನಿಗೆ ಸರಿಯಾಗಿ ನೀರು ತಲುಪುತ್ತಿಲ್ಲ ಎಂದು ರೈತರು ದೂರಿದರು.
ಕೂಡಲೇ ವಾರಬಂದಿ ಪದ್ಧತಿಯನ್ನು ಕೈ ಬಿಟ್ಟು, ಮುಂಗಾರು ಬೆಳೆ ಬರುವವರೆಗೆ ನಾಲೆಗೆ ನಿರಂತರವಾಗಿ ನೀರು ಹರಿಸಬೇಕು. ಆಧುನೀಕರಣ ಹಾಗೂ ನವೀಕರಣ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ನಡೆಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಹೋರಾಟದ ಸ್ಥಳಕ್ಕೆ ಸಹಾಯಕ ಆಯುಕ್ತೆ ಮಹಿಬೂಬಿ ಹಾಗೂ ಎಇಇ ಮಹಾಲಿಂಗಪ್ಪ ಭಜಂತ್ರಿ, ಜೆಇ ಶ್ರೀಧರ್ ಭೇಟಿ ನೀಡಿ, ಬೇಡಿಕೆ ಈಡೇರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ರಂಗಣ್ಣ ಕೋಲ್ಕರ್, ಗ್ರಾಪಂ ಸದಸ್ಯರಾದ ತಿಮ್ಮಣ್ಣ ನಾಯಕ ದಿವಾನ್, ರಂಗಪ್ಪ ಬಂಡಿ, ರೈತರಾದ ಭೀಮಣ್ಣ ಡೆಂಗಿ, ನಾರಾಯಣಗೌಡ, ದುರಗಪ್ಪ ವರಟಿ, ರಂಗನಾಥ ಬುಂಕಲದೊಡ್ಡಿ ಇದ್ದರು.