

ಬೆಂಗಳೂರು: ಹಾಲಿ ವರ್ಷ ಕಳಪೆ ಫಾರ್ಮ್ನಿಂದಾಗಿ ಸತತ ವೈಫಲ್ಯ ಕಾಣುತ್ತಿರುವ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು, ಇದೀಗ ಹಿಂದಿನ ಲಯಕ್ಕೆ ಮರಳಲು ಬ್ಯಾಡ್ಮಿಂಟನ್ ದಿಗ್ಗಜ ಹಾಗೂ ಕನ್ನಡಿಗ ಪ್ರಕಾಶ್ ಪಡುಕೋಣೆ ನೆರವು ಕೋರಿದ್ದಾರೆ. ಏಷ್ಯನ್ ಗೇಮ್ಸ್ಗೆ ಪೂರ್ವಭಾವಿಯಾಗಿ ಬೆಂಗಳೂರಿನ ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ 28 ವರ್ಷದ ಪಿವಿ ಸಿಂಧು ಒಂದು ವಾರ ಕಾಲ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ ಗೆದ್ದ ಮೊಟ್ಟಮೊದಲ ಭಾರತೀಯರೆಂಬ ಹೆಗ್ಗಳಿಕೆಯ ಪ್ರಕಾಶ್ ಪಡುಕೋಣೆ, ಶಿಬಿರದಲ್ಲಿ ಸಿಂಧುಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಸಿಂಧು ಅವರ ಹೊಸ ಕೋಚ್ ಆಗಿರುವ ಮಲೇಷ್ಯಾದ ಮುಹಮ್ಮದ್ ಹಫಿಜ್ ಹಾಶಿಂ ಕೂಡ ಶಿಬಿರದಲ್ಲಿದ್ದಾರೆ. ಸಿಂಧು ಶಿಬಿರದಲ್ಲಿ ಪ್ರತಿ ದಿನ 6-7 ಗಂಟೆಗಳ ಕಾಲ ಅಭ್ಯಾಸ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸಿಂಧು ಹಾಲಿ ವರ್ಷ ಇದುವರೆಗೆ ಒಂದೂ ಪ್ರಶಸ್ತಿ ಗೆದ್ದಿಲ್ಲ. ಸ್ಪೇನ್ ಮಾಸ್ಟರ್ಸ್ನಲ್ಲಿ ರನ್ನರ್ಅಪ್ ಆಗಿದ್ದೇ ಶ್ರೇಷ್ಠ ಸಾಧನೆ ಎನಿಸಿದೆ. ಈ ವರ್ಷ 7 ಟೂರ್ನಿಗಳಲ್ಲಿ ಅವರು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಕಳೆದ ತಿಂಗಳು ವಿಶ್ವ ಚಾಂಪಿಯನ್ಷಿಪ್ನಲ್ಲೂ 2ನೇ ಸುತ್ತಿನಲ್ಲಿ ಸೋತಿದ್ದರು. ನಂತರ ಚೀನಾ ಓಪನ್ನಿಂದ ಹೊರಗುಳಿದಿದ್ದರು. ಪ್ರಕಾಶ್ ಪಡುಕೋಣೆ ಅಕಾಡೆಮಿಯ ಶಿಬಿರ ಈ ವಾರ ಮುಕ್ತಾಯಗೊಳ್ಳಲಿದ್ದು, ಬಳಿಕ ಸೆಪ್ಟೆಂಬರ್ 12ರಿಂದ ನಡೆಯಲಿರುವ ಹಾಂಕಾಂಗ್ ಓಪನ್ನಲ್ಲಿ ಅವರು ಮರಳಿ ಕಣಕ್ಕಿಳಿಯಲಿದ್ದಾರೆ. ಏಷ್ಯಾಡ್ ಸಿದ್ಧತೆಗೆ ಇದು ಅವರಿಗೆ ಕೊನೇ ಟೂರ್ನಿಯಾಗಿರಲಿದೆ.