ಬಾಕ್ಸ್​ ಆಫೀಸ್​ನಲ್ಲಿ 'ಜೈಲರ್'​ ಕಮಾಲ್​; ಮೊದಲ ವಾರದ ಕಲೆಕ್ಷನ್​ ವರದಿ ಇಲ್ಲಿದೆ

Untitled design - 2023-08-17T160206.307
Published on

ತಮಿಳುನಾಡು: ಕಾಲಿವುಡ್ ಸೂಪರ್‌ಸ್ಟಾರ್, ಅಭಿಮಾನಿಗಳ ನೆಚ್ಚಿನ ತಲೈವಾ, ರಜನಿಕಾಂತ್ ಅಭಿನಯದ 'ಜೈಲರ್'​ ಇದೀಗ ಜಾಗತಿಕವಾಗಿ ಬ್ಲಾಕ್​​ಬಸ್ಟರ್​ ಹಿಟ್​ ಚಿತ್ರವಾಗಿ ಹೊರಹೊಮ್ಮಿದೆ. ಆಗಸ್ಟ್ 10, 2023 ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಇಂದು ಬಾಕ್ಸ್​ ಆಫೀಸ್ ಕಲೆಕ್ಷನ್​ನಲ್ಲಿ ದಾಖಲೆ ಬರೆಯುತ್ತಿದೆ.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ಜೈಲರ್'​ ಚಿತ್ರದ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್, ಮೊದಲ ವಾರದ ಬಾಕ್ಸ್​ ಆಫೀಸ್​ ಗಳಿಕೆಯನ್ನು ಅಧಿಕೃತವಾಗಿ ಘೋಷಿಸಿದೆ. ಜಾಗತಿಕವಾಗಿ ಇಲ್ಲಿಯವರೆಗೆ 375.40 ಕೋಟಿ ರೂ. ಮೊತ್ತವನ್ನು ಚಿತ್ರ ಗಳಿಸಿದೆ. ಇದು ಕೇವಲ ಸದ್ಯದ ವರದಿಯಾಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಹೆಚ್ಚುತ್ತಿರುವ ಹಿನ್ನಲೆ ಅಂಕಿ-ಅಂಶವು ನವೀಕರಣಗೊಳ್ಳಲಿದೆ ಎಂದು ಚಿತ್ರತಂಡ ತಿಳಿಸಿದೆ.

ಸದ್ಯ ಸಿನಿಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾದ ಜೈಲರ್​ ಚಿತ್ರದಲ್ಲಿ, ತಲೈವಾ ರಜನಿಕಾಂತ್​ ಮತ್ತು ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಅವರ ಪಾತ್ರಗಳು ಪ್ರೇಕ್ಷಕರ ಹುಬ್ಬೇರುವಂತೆ ಮಾಡಿದೆ. ಇಬ್ಬರ ನಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.​ ಚಿತ್ರದಲ್ಲಿ ವಿನಾಯಕನ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಮೋಹನ್ ಲಾಲ್, ಜಾಕಿ ಶ್ರಾಫ್, ಮಿರ್ನಾ ಮೆನನ್, ಸುನಿಲ್ ಮತ್ತು ಯೋಗಿ ಬಾಬು ಮತ್ತಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net