ಜೈಲಿನಲ್ಲಿ ಜನದಟ್ಟಣೆ : ಚಿಕ್ಕ ಅಪರಾಧಗಳಲ್ಲಿ ಬಂಧನ ಬೇಡ ಎಂದ ಸುಪ್ರೀಂ

supreme court
supreme court
Published on

ನವದೆಹಲಿ : ಉಲ್ಬಣವಾಗುತ್ತಿರುವ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದ ಜೈಲುಗಳಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇಂದು ಸುಪ್ರೀಂ ಕೋರ್ಟ್​ ವಿವರವಾದ ಆದೇಶ ಹೊರಡಿಸಿದೆ. ಖೈದಿಗಳಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳು ಸಿಗುವಂತೆ ಕ್ರಮ ಕೈಗೊಳ್ಳಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಮತ್ತೊಂದೆಡೆ, ಅಗತ್ಯವಿಲ್ಲದಿದ್ದರೆ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ಉಳ್ಳ ಅಪರಾಧಗಳಲ್ಲಿ ಆರೋಪಿಗಳನ್ನು ಬಂಧಿಸಬೇಡಿ ಎಂದು ಪೊಲೀಸರಿಗೆ ಸೂಚಿಸಿದೆ.

ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ರಚಿಸಿರುವ ಉನ್ನತ ಸಮಿತಿಗಳಿಗೆ ಸೋಂಕಿಗೆ ಒಳಪಡುವ ಅಪಾಯವಿರುವ ಕೈದಿಗಳನ್ನು ಗುರುತಿಸಿ, ತುರ್ತಾಗಿ ಬಿಡುಗಡೆ ಮಾಡಲು ಸೂಚಿಸಿದೆ. ಕಳೆದ ವರ್ಷ ಕರೊನಾ ಅಲೆ ಎದ್ದಾಗ ಮಾರ್ಚ್​​ನಲ್ಲಿ ಪರೋಲ್​ ಮೇಲೆ ಬಿಡುಗಡೆ ಮಾಡಲಾಗಿದ್ದ ಕೈದಿಗಳಿಗೆ ಮತ್ತೆ 90 ದಿನಗಳ ಅವಧಿಗೆ ಶಿಕ್ಷೆಯಿಂದ ತಾತ್ಕಾಲಿಕ ವಿನಾಯಿತಿ ನೀಡಬೇಕೆಂದು ಸೂಚಿಸಿದೆ.

"ಉನ್ನತ ಸಮಿತಿಗಳು ಹೊಸದಾಗಿ ಬಿಡುಗಡೆ ಮಾಡಲು ಕೈದಿಗಳನ್ನು ಗುರುತಿಸಬೇಕು. ಅದರೊಂದಿಗೆ ಮಾರ್ಚ್​ 23, 2020 ರ ಆದೇಶದನುಸಾರ ಬಿಡುಗಡೆ ಮಾಡಲಾಗಿದ್ದವರಿಗೆಲ್ಲ ಸೂಕ್ತ ಷರತ್ತುಗಳನ್ನು ವಿಧಿಸಿ, ಕೂಡಲೇ ಬಿಡುಗಡೆ ಮಾಡಬೇಕು" ಎಂದು ಕೋರ್ಟ್​ ಹೇಳಿದೆ.

ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಜೈಲುಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವ ಸಮಸ್ಯೆ ಇದೆ. ಹೀಗಾಗಿ ಕೈದಿಗಳಿಗೆ ಮತ್ತು ಜೈಲು ಸಿಬ್ಬಂದಿಗೆ ನಿಯಮಿತ ಅವಧಿಗಳಲ್ಲಿ ಪರೀಕ್ಷೆಗಳನ್ನು ನಡೆಸಿ, ಸೋಂಕು ಕಂಡುಬಂದಲ್ಲಿ ತಕ್ಷಣ ಚಿಕಿತ್ಸೆ ನೀಡುವ ಕೆಲಸ ಸನೆಯಬೇಕು. ಪ್ರತಿನಿತ್ಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಕೋರ್ಟ್​ ಹೇಳಿದೆ. (ಏಜೆನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net