

ತಿರುಪತಿ: ತಿರುಪತಿ ತಿಮ್ಮಪ್ಪ ದೇಗುಲದ ಪ್ರಸಾದವಾದ ಲಡ್ಡು(Tirupati Laddu Row) ತಯಾರಿಕೆಗೆ ಪ್ರಾಣಿಗಳ ಕೊಬ್ಬು ಒಳಗೊಂಡ ಕಳಪೆ ತುಪ್ಪ ಪೂರೈಕೆ ಹಿಂದಿನ ವ್ಯಕ್ತಿ ಎಂದೇ ಆರೋಪಗಳು ಕೇಳಿಬರುತ್ತಿದ್ದ ಮಾಜಿ ಸಿಎಂ ವೈಎಸ್ ಜಗನ್ ಶನಿವಾರ(ಸೆ.28) ಪೂಜೆ ನೆರವೇರಿಸಲು ಮುಂದಾಗಿದ್ದಾರೆ.
'ಎಕ್ಸ್' ವೇದಿಕೆಯಲ್ಲಿ ಈ ಘೋಷಣೆ ಮಾಡಿರುವ ಜಗನ್, ತಿರುಮಲದ ಪಾವಿತ್ರ್ಯದ ವಿರುದ್ಧ ಚಂದ್ರಬಾಬು ನಾಯ್ಡು ಸರ್ಕಾರ ಷಡ್ಯಂತ್ರ ನಡೆಸಿದೆ. ಹೀಗಾಗಿ 'ತಿರುಮಲದ ಪಾವಿತ್ರ್ಯತೆ, ಸ್ವಾಮಿಯ ಪ್ರಸಾದ ವಿಶಿಷ್ಠತೆ, ವೆಂಕಟೇಶ್ವರ ಸ್ವಾಮಿಯ ಮಹಿಮೆ, ಟಿಟಿಡಿ ಖ್ಯಾತಿ, ವೆಂಕಟೇಶ್ವರ ಸ್ವಾಮಿ ನೀಡುವ ಲಡ್ಡು ಪಾವಿತ್ರ್ಯತೆ ಉಳಿಸಲು ಹಾಗೂ ರಾಜಕೀಯ ನೆಪದಿಂದ' ಮಾಡಲಾಗಿರುವ ಆರೋಪಗಳನ್ನು ತೊಡೆದುಹಾಕಲು ಪೂಜಾ ದೀಕ್ಷೆ ಕೈಗೊಳ್ಳಲಾಗಿದೆ ಎಂದು ಎಂದು ಜಗನ್ ವಿವರಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನದಲ್ಲಿರುವ ಚಂದ್ರಬಾಬು ನಾಯ್ಡು ತಿರುಮಲ, ತಿರುಮಲ ಲಡ್ಡು, ವೆಂಕಟೇಶ್ವರ ಸ್ವಾಮಿಗೆ ಕಳಂಕ ತಂದು ಮಾಡಿರುವ ಪಾಪ ನಿವಾರಣೆಗೆ ರಾಜ್ಯಾದ್ಯಂತ ಸೆಪ್ಟೆಂಬರ್ 28ರ ಶನಿವಾರದಂದು ನಡೆಯುವ ಪೂಜೆಗಳಲ್ಲಿ ಪಾಲ್ಗೊಳ್ಳುವಂತೆ ವೈಎಸ್‌ಆರ್‌ಸಿಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ತಿರುಪತಿ ವೆಂಕಟೇಶ್ವರ ಸ್ವಾಮಿ ಪ್ರಸಾದವಾದ ಲಡ್ಡು ತಯಾರಿಕೆಗೆ ಈ ಹಿಂದೆ ನಂದಿನಿ ತುಪ್ಪ ತಪ್ಪಿಸಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪ ಕೇಳಿ ಬಂದ ನಂತರ ಆಂಧ್ರಪ್ರದೇಶದಲ್ಲಿ ತೀವ್ರ ರಾಜಕೀಯ ಗದ್ದಲ ನಡೆಯುತ್ತಿದೆ. ಈ ವಿಚಾರದಲ್ಲಿ ಟಿಡಿಪಿ, ಬಿಜೆಪಿ, ಜನಸೇನೆ ಮತ್ತು ವೈಎಸ್‌ಆರ್‌ಸಿಪಿ ನಡುವೆ ವಾಗ್ಯುದ್ಧ ನಡೆಯುತ್ತಿದೆ. ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ದೀಕ್ಷೆ ಕೈಗೊಂಡಿದ್ದರು. ತಿರುಮಲ ವಿವಾದವನ್ನು ಉಲ್ಬಣಗೊಳಿಸಿರುವುದರಿಂದ ವೈಎಸ್‌ಆರ್‌ಸಿಪಿಗೆ ಕೆಟ್ಟ ಹೆಸರು ಬರಲಿದೆ ಎಂದು ಅರಿತ ವೈಎಸ್ ಜಗನ್ ಪೂಜೆ ಸಲ್ಲಿಸುವ ಘೋಷಣೆ ಮಾಡಿದ್ದಾರೆ. ಆದರೆ, ಅವರು ಎಲ್ಲಿ ಭಾಗವಹಿಸುತ್ತಾರೆ ಎಂಬುದು ನಿಗೂಢವಾಗಿದೆ.