

ಅಮರಾವತಿ: ವೈಎಸ್‌ಆರ್ ಕಾಂಗ್ರೆಸ್ (ವೈಎಸ್‌ಆರ್‌ಸಿಪಿ) ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಐತಿಹಾಸಿಕ ತಿರುಪತಿ ದೇವಾಲಯಕ್ಕೆ ಭೇಟಿ ನೀಡುವುದನ್ನು ರದ್ದುಗೊಳಿಸಿದ್ದಾರೆ. ಪ್ರಸಾದವಾದ ತಿರುಪತಿ ಲಡ್ಡು(Tirupati Laddu) ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ವಿವಾದದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಅವರ ಭೇಟಿಯ ವೇಳೆ ಯಾವುದೇ ಅಡೆತಡೆ ಅಥವಾ ಭದ್ರತಾ ಕಾಳಜಿಯನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವೈಎಸ್‌ಆರ್‌ಸಿಪಿ ಮೂಲಗಳು ತಿಳಿಸಿವೆ.
ಶ್ರೀವಾರಿ ಲಡ್ಡುವಿನ ಪಾವಿತ್ರ್ಯತೆಗೆ ಧಕ್ಕೆ ತರಲು ಸುಳ್ಳು ಪ್ರಚಾರದ ಮೂಲಕ ಚಂದ್ರಬಾಬು ನಾಯ್ಡು ಭರ್ಜರಿ ಪ್ರಚಾರ ನಡೆಸಿದ್ದಾರೆ. ರಾಜಕೀಯ ವಂಚನೆಯಿಂದ ಚಂದ್ರಬಾಬು ಮಾಡಿದ ಪಾಪ ನಿವಾರಣೆಗೆ ಸೆಪ್ಟೆಂಬರ್ 28ರಂದು (ಶನಿವಾರ) ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲಿದ್ದೇವೆ ಎಂದು ವೈಎಸ್ ಜಗನ್ ಮೋಹನ್ ರೆಡ್ಡಿ ಶುಕ್ರವಾರ(ಸೆಪ್ಟೆಂಬರ್ 26) ಹೇಳಿದ್ದರು.
ಜಗನ್ ಅವರ ಈ ಘೋಷಣೆ ಬಳಿಕ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಅಲಯನ್ಸ್ (ಎನ್‌ಡಿಎ) ಮಾಜಿ ಮುಖ್ಯಮಂತ್ರಿ ದೇವಸ್ಥಾನ ಪ್ರವೇಶಿಸುವ ಮೊದಲು ತಮ್ಮ ನಂಬಿಕೆಯನ್ನು ಸಾಬೀತುಪಡಿಸುವಂತೆ ಒತ್ತಾಯಿಸಿತು. ವಿದೇಶಿಗರು ಮತ್ತು ಹಿಂದೂಯೇತರರು ದೇವಾಲಯದಲ್ಲಿ ವೆಂಕಟೇಶ್ವರನ ದರ್ಶನವನ್ನು ಪಡೆಯುವ ಮೊದಲು ಭಗವಂತನ ಮೇಲಿನ ಗೌರವವನ್ನು ಸಾಬೀತುಪಡಿಸಬೇಕು ಎಂದು ಟಿಟಿಡಿ ನಿಯಮಗಳು ತಿಳಿಸುತ್ತವೆ.
1990ರಲ್ಲಿ ತಿರುಮಲ ಶ್ರೀವಾರಿ ಭೇಟಿಗೆ ಮೊದಲು ಅನ್ಯಧರ್ಮೀಯರು ಘೋಷಣೆಯನ್ನು ನೀಡಬೇಕೆಂದು ಜಂಟಿ ಆಂಧ್ರಪ್ರದೇಶದ ವಿಶೇಷ ಕಾನೂನನ್ನು ಪರಿಚಯಿಸಲಾಯಿತು. ನಿಯಮವು ಹಳೆಯದಾದರೂ ಅದನ್ನು ಘೋಷಿಸುವ ಹೊಸ ಸೈನ್‌ಬೋರ್ಡ್‌ಗಳು ದೇವಾಲಯದ ಬಳಿ ಪ್ರಸ್ತುತ ಹುಟ್ಟಿಕೊಂಡಿವೆ. ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥರು ಭೇಟಿ ನೀಡುವುದಾಗಿ ಘೋಷಿಸಿದ ಬಳಿಕ ದೇಗುಲದಲ್ಲಿ ಹೊಸ ಸೈನ್‌ಬೋರ್ಡ್‌ಗಳು ಹುಟ್ಟಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.
ಜಗನ್ ಮೋಹನ್ ರೆಡ್ಡಿ ಅವರ ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಸೇರಿದಂತೆ ಗುಣಮಟ್ಟವಿಲ್ಲದ ಪದಾರ್ಥಗಳು ಕಂಡುಬಂದಿವೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ ಬಳಿದ ದೇಶಾದ್ಯಂತ ವಿವಾದ ಹುಟ್ಟಿಕೊಂಡಿತ್ತು. ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರುವುದರ ಜತಗೆ ತನಿಖೆಗೆ ಸಮಿತಿಯೊಂದನ್ನು ರಚಿಸಲಾಗಿದೆ.(ಏಜೆನ್ಸೀಸ್)