ಮತಿಗೆಟ್ಟ ನಾಯಕರಿಂದಾಗಿ ಗತಿಗೆಟ್ಟ ಪಾಕಿಸ್ತಾನ

pakistan
Published on

ಕಾಶ್ಮೀರ ವಿಷಯ ರ್ಚಚಿಸಲು ಓಐಸಿ ಸಮಾವೇಶ ಕರೆಯಲು ಸೌದಿ ಅರೇಬಿಯಾಗಾಗಲೀ, ಇತರ ಪ್ರಮುಖ ಮುಸ್ಲಿಂ ದೇಶಗಳಿಗಾಗಲೀ ಈಗ ಆಸಕ್ತಿಯಿಲ್ಲ. ಮೋದಿ ನೇತೃತ್ವದ ಸರ್ಕಾರದ ರಾಜತಂತ್ರ ನಡೆಯಿಂದ ಅವೆಲ್ಲವೂ ಭಾರತದ ಪರವಾಗಿ ಬದಲಾಗಿವೆ.

ಆರ್ಥಿಕ ಸಂಕಷ್ಟದಲ್ಲಿ ಮುಳುಗಿಹೋಗಿದ್ದ, ಭ್ರಷ್ಟಾಚಾರದಿಂದ ತತ್ತರಿಸಿಹೋಗಿದ್ದ ಪಾಕಿಸ್ತಾನದ ಗತಿಯನ್ನೇ ಬದಲಾಯಿಸುವ, ‘ನಯಾ ಪಾಕಿಸ್ತಾನ್’ ಅನ್ನು ಜಗತ್ತಿನ ಮುಂದೆ ನಿಲ್ಲಿಸುವ ಆಶ್ವಾಸನೆಯೊಂದಿಗೆ ದೇಶದ ಇಪ್ಪತ್ತೆರಡನೆಯ ಪ್ರಧಾನಿಯಾಗಿ ಗದ್ದುಗೆಗೇರಿದ ಇಮ್ರಾನ್ ಖಾನ್ ಅಧಿಕಾರದಲ್ಲಿ ಈಗಷ್ಟೇ ಎರಡು ವರ್ಷಗಳನ್ನು ಪೂರೈಸಿದ್ದಾರೆ. ತನ್ನ ಘಾತಕ ಇನ್​ಸ್ವಿಂಗರ್​ಗಳಿಂದ ವಿಶ್ವದ ಎಲ್ಲ ಬ್ಯಾಟಿಂಗ್ ದಿಗ್ಗಜರನ್ನು ಕಂಗಾಲುಗೊಳಿಸಿದ, ತನ್ನ ನಾಯಕತ್ವದಲ್ಲಿ ಪಾಕಿಸ್ತಾನದ ಕಿರೀಟವನ್ನು ವಿಶ್ವಕಪ್ ಸೇರಿ ಬಹುತೇಕ ಎಲ್ಲ ಪ್ರಮುಖ ಅಂತಾರಾಷ್ಟ್ರೀಯ ಕ್ರಿಕೆಟ್ ಟ್ರೋಫಿಗಳಿಂದ ಅಲಂಕರಿಸಿದ ಇಮ್ರಾನ್ ಖಾನ್ ಅಷ್ಟೇ ಚಾಕಚಕ್ಯತೆಯಿಂದ ರಾಷ್ಟ್ರವನ್ನೂ ಮುಂದೆ ನಡಸುತ್ತಾರೆ ಎಂದು ಸಾಮಾನ್ಯ ಪಾಕಿಸ್ತಾನೀಯರು ನಂಬಿದ್ದರಲ್ಲಿ ಅಚ್ಚರಿಯಿಲ್ಲ. ಹಾಗೆಯೇ, ‘ಭಿಕ್ಷಾಪಾತ್ರೆ ಹಿಡಿದು ಐಎಂಎಫ್ ಮುಂದೆ ಹೋಗುವುದಕ್ಕಿಂತ ನಾನು ಸಾವನ್ನೇ ಅಪ್ಪಿಕೊಳ್ಳುತ್ತೇನೆ’ ಎಂದು ಖಾನ್ ಘೊಷಿಸಿದಾಗ ಸ್ವಾಭಿಮಾನಿ ರಾಷ್ಟ್ರನಾಯಕನೊಬ್ಬನ ಕನಸನ್ನು ಪಾಕಿಸ್ತಾನೀಯರು ಕಂಡದ್ದೂ ಅಚ್ಚರಿಯಲ್ಲ.

ಆದರೆ, ಈ ಎರಡು ವರ್ಷಗಳಲ್ಲಿ ಆ ಆಶಯಗಳೆಲ್ಲವೂ ಭ್ರಮನಿರಸನದಲ್ಲಿ ಬದಲಾಗಿವೆ.ಅಧಿಕಾರ ವಹಿಸಿಕೊಂಡ ಒಂದೇ ವರ್ಷದಲ್ಲಿ ಐಎಂಎಫ್ (ಇಂಟರ್ ನ್ಯಾಷನಲ್ ಮಾನಿಟರಿ ಫಂಡ್) ಮುಂದೆ ಕೈಯೊಡ್ಡಿ ಆರು ಬಿಲಿಯನ್ ಡಾಲರ್ ಸಾಲ ಪಡೆದುಕೊಂಡ ಇಮ್ರಾನ್ ಖಾನ್ ಮತ್ತೆ 1.4 ಬಿಲಿಯನ್ ಡಾಲರ್ ಕೇಳಿ ಇಲ್ಲ ಅನ್ನಿಸಿಕೊಂಡಿದ್ದಾರೆ. 2018ರಲ್ಲಿ ಶೇಕಡ 5ರಷ್ಟಿದ್ದ ಪಾಕಿಸ್ತಾನದ ವಾರ್ಷಿಕ ಅಭಿವೃದ್ಧಿ ದರ ಈಗ ಶೇ.-0.5ಕ್ಕೆ ಕುಸಿದುಹೋಗಿದೆ, ಹಣದುಬ್ಬರ ಶೇಕಡ ಹತ್ತಕ್ಕಿಂತ ಹೆಚ್ಚಾಗಿದೆ. ‘ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್’ನ ಜಾಲತಾಣದಲ್ಲಿ ಸಿಗುವ ಮಾಹಿತಿಗಳ ಪ್ರಕಾರ ಈಗ ಅಲ್ಲಿ 11 ಬಿಲಿಯನ್ ಡಾಲರ್ ವಿದೇಶೀ ವಿನಿಮಯವಿದೆ, ಆದರೆ ಅದರಲ್ಲಿ 9 ಬಿಲಿಯನ್ ಡಾಲರ್ ವಿದೇಶೀ ಸಾಲಗಳ ಕಂತುಗಳ ಮರುಪಾವತಿ ಮತ್ತು ಬಡ್ಡಿ ಕಟ್ಟುವಿಕೆಗಾಗಿ ವ್ಯಯವಾಗಲಿದೆ! ಅಂದರೆ ಆಮದುಗಳಿಗಾಗಿ ಲಭ್ಯವಿರುವುದು 2 ಬಿಲಿಯನ್ ಮಾತ್ರ! ಭಾರತವಿಂದು 538.191 ಬಿಲಿಯನ್ ಡಾಲರ್​ಗಿಂತಲೂ ಅಧಿಕ ವಿದೇಶೀ ವಿನಿಮಯವನ್ನು ಪೇರಿಸಿಟ್ಟುಕೊಂಡಿದೆ ಎಂದರೆ ಪಾಕಿಸ್ತಾನದ ಸಂಕಟದ ಅರಿವು ನಿಮಗಾಗಬಹುದು.

ಇಮ್ರಾನ್ ಖಾನ್ ಸರ್ಕಾರದ ವಿದೇಶನೀತಿ ಚುಕ್ಕಾಣಿಯಿಲ್ಲದ ಹಡಗಿನಂತಾಗಿದೆ. ಪರಿಣಾಮವಾಗಿ ಇಂದು ಪಾಕಿಸ್ತಾನ ಜಾಗತಿಕ ರಾಜಕಾರಣದಲ್ಲಿ, ಇಸ್ಲಾಮಿಕ್ ಜಗತ್ತಿನಲ್ಲಿ ತನ್ನ ಸ್ಥಾನವೇನು, ಪಾತ್ರವೇನು ಎನ್ನುವುದರ ಬಗ್ಗೆ ತನಗೇ ಅರಿವಿಲ್ಲದಂತೆ ವರ್ತಿಸುತ್ತಿದೆ. ಇದು ಢಾಳಾಗಿ ಗೋಚರವಾಗುವುದು ಸೌದಿ ಅರೇಬಿಯಾದ ಕುರಿತಾಗಿ ಇಮ್ರಾನ್ ಸರ್ಕಾರ ಅನುಸರಿಸುತ್ತಿರುವ ಆತ್ಮಹತ್ಯಾ ನೀತಿಗಳಲ್ಲಿ ಮತ್ತು ಆ ನೀತಿಗಳಿಂದಾಗಿ ಪಾಕಿಸ್ತಾನ ಸಿಲುಕಿರುವ ಸಂಕಟಗಳಲ್ಲಿ.

ಹೇಳಿಕೇಳಿ ಸೌದಿ ಅರೇಬಿಯಾ ಮುಸ್ಲಿಂ ಜಗತ್ತಿನ ಏಕಮೇವಾದ್ವಿತೀಯ ನಾಯಕ. ಇಸ್ಲಾಮಿಕ್ ಪವಿತ್ರ ಸ್ಥಾನಗಳಾದ ಮೆಕ್ಕಾ ಮತ್ತು ಮದೀನಾಗಳು ಅಲ್ಲಿರುವ ಕಾರಣ ಜಗತ್ತಿನ ಪ್ರತಿಯೊಬ್ಬ ಶ್ರದ್ಧಾವಂತ ಮುಸ್ಲಿಂನೂ ದಿನಕ್ಕೆ ಐದು ಬಾರಿ ಅತ್ತ ಮುಖ ಮಾಡಿ ಪ್ರಾರ್ಥಿಸುತ್ತಾನೆ ಮತ್ತು ಜೀವನದಲ್ಲಿ ಒಮ್ಮೆಯಾದರೂ ಆ ಪವಿತ್ರ ಭೂಮಿಗೆ ತೀರ್ಥಯಾತ್ರೆ ಹೋಗಬೇಕೆಂದು ಬಯಸುತ್ತಾನೆ. ಈ ಧಾರ್ವಿುಕ ಕಾರಣ ಸೌದಿ ಅರೇಬಿಯಾಗೆ ಇಸ್ಲಾಮಿಕ್ ಜಗತ್ತಿನಲ್ಲೊಂದು ಯಾರೂ ಕಸಿಯಲಾಗದ ವಿಶಿಷ್ಟ ಸ್ಥಾನವನ್ನು ನೀಡಿದೆ. ಸೌದಿ ಅರೇಬಿಯಾದ ಅಗಾಧ ತೈಲಭಂಡಾರ, ಅದರಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆ ದೇಶಕ್ಕಿರುವ ಪ್ರಮುಖ ಸ್ಥಾನ, ಅದು ವರ್ಷವರ್ಷವೂ ತರುತ್ತಿರುವ ಅಗಾಧ ಧನರಾಶಿಯಿಂದಾಗಿ ಮರಳುಗಾಡಿನ ಆ ದೇಶ ಗಳಿಸಿರುವ ಶ್ರೀಮಂತಿಕೆ ಮುಸ್ಲಿಂ ಜಗತ್ತಿನಲ್ಲಿ ಅದಕ್ಕೊಂದು ಗೌರವಾನ್ವಿತ ಸ್ಥಾನವನ್ನು ನೀಡಿವೆ. ತನ್ನ ಅಗಾಧ ಪೆಟ್ರೋಡಾಲರ್ ಭಂಡಾರದ ಒಂದು ದೊಡ್ದ ಅಂಶವನ್ನು ಶಸ್ತ್ರಾಸ್ತ್ರ ಖರೀದಿಗಾಗಿ ಬಳಸುವ ಸೌದಿ ಅರೇಬಿಯಾ ಒಂದು ಬಲಾಢ್ಯ ಸೇನಾಶಕ್ತಿ ಸಹ. ಜತೆಗೆ ತನ್ನ ಶ್ರೀಮಂತಿಕೆಯ ಒಂದಂಶವನ್ನು ಬಡ ಮುಸ್ಲಿಂ ದೇಶಗಳ ಜತೆ ಹಂಚಿಕೊಳ್ಳುವ ರಿಯಾಧ್ ಸರ್ಕಾರ ಮಸ್ಲಿಂ ದೇಶಗಳ ಆಪದ್ಬಾಂಧವ ಸಹ. ಈ ಎಲ್ಲ ಕಾರಣಗಳು ಮುಸ್ಲಿಂ ಜಗತ್ತಿನ ಹಿರಿಯಣ್ಣನ ಸ್ಥಾನವನ್ನು ಸೌದಿ ಅರೇಬಿಯಾಗೆ ಚಿನ್ನದ ತಟ್ಟೆಯಲ್ಲಿಟ್ಟು ನೀಡಿಬಿಟ್ಟಿವೆ. ಆ ಸ್ಥಾನವನ್ನು ಅಧಿಕೃತಗೊಳಿಸಿರುವುದು ರಿಯಾಧ್​ಗೆ ಸಿಕ್ಕಿರುವ ‘ಆರ್ಗನೈಝೇಷನ್ ಆಫ್ ಇಸ್ಲಾಮಿಕ್ ಕಂಟ್ರೀಸ್’ ಸಂಘಟನೆಯ ನಾಯಕತ್ವ. ಸಹಾಯ, ಮಾರ್ಗದರ್ಶನಕ್ಕಾಗಿ ಮುಸ್ಲಿಂ ರಾಷ್ಟ್ರಗಳು ಸೌದಿ ಅರೇಬಿಯಾದತ್ತ ನೋಡುತ್ತಿರುತ್ತವೆ. ಆ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನವೂ ಇದೆ.

ತೀರಾ ಇತ್ತೀಚಿನ ಇತಿಹಾಸವನ್ನೇ ತೆಗೆದುಕೊಂಡರೆ, 1998ರ ಮೇನಲ್ಲಿ ಭಾರತ-ಪಾಕಿಸ್ತಾನಗಳೆರಡೂ ನಡೆಸಿದ ಅಣ್ವಸ್ತ್ರ ಪರೀಕ್ಷೆಗಳಿಂದಾಗಿ ಕುಪಿತಗೊಂಡ ಅಮೆರಿಕ ಎರಡೂ ದೇಶಗಳ ವಿರುದ್ಧ ಕೆಲವು ಆರ್ಥಿಕ ಕಟ್ಟುಪಾಡುಗಳನ್ನು ವಿಧಿಸಿದಾಗ ಅದರಿಂದ ಹೆಚ್ಚು ಬಾಧಿತಗೊಂಡದ್ದು ಬಲಹೀನ ಅರ್ಥವ್ಯವಸ್ಥೆಯ ಪಾಕಿಸ್ತಾನ. ಅದರ ಸಂಕಷ್ಟ ಯಾವ ಮಟ್ಟಕ್ಕೇರಿತೆಂದರೆ ದೈನಂದಿನ ಅಗತ್ಯಕ್ಕಾಗಿ ಪೆಟ್ರೋಲ್ ಆಮದು ಮಾಡಿಕೊಳ್ಳುವುದಕ್ಕೂ ಆಗದಷ್ಟು. ಆಗ ದಿನಕ್ಕೆ ಒಂದುಲಕ್ಷ ಬ್ಯಾರೆಲ್ ಪೆಟ್ರೋಲ್ ಒದಗಿಸಲು ಸೌದಿ ಅರೇಬಿಯಾ ಮುಂದೆಬಂತು. ಇದರಲ್ಲಿ ಐವತ್ತು ಸಾವಿರ ಬ್ಯಾರೆಲ್​ಗಳಿಗಾಗಿನ ಹಣವನ್ನು ನಿಧಾನವಾಗಿ, ಹಂತಹಂತವಾಗಿ ಚುಕ್ತಾ ಮಾಡವಂತೆ ರಿಯಾಧ್ ರಿಯಾಯಿತಿ ತೋರಿತು. ಇನ್ನುಳಿದ ಐವತ್ತು ಸಾವಿರ ಬ್ಯಾರೆಲ್ ಪೆಟ್ರೋಲ್ ಪಾಕಿಸ್ತಾನಕ್ಕೆ ಸಂಪೂರ್ಣ ಪುಕ್ಕಟೆ! ಈ ವ್ಯವಸ್ಥೆ ಆಗಿನ ಕ್ಲಿಂಟನ್ ಸರ್ಕಾರ ಆರ್ಥಿಕ ಕಟ್ಟುಪಾಡುಗಳನ್ನು ತೆಗೆದುಹಾಕುವವರೆಗೂ ಮುಂದುವರಿಯಿತು. ಸರಿಸುಮಾರು ಇಂತಹದೇ ಸಹಕಾರವನ್ನು ಇಮ್ರಾನ್ ಖಾನ್ ಅಧಿಕಾರ ವಹಿಸಿಕೊಂಡ ಮೂರು ತಿಂಗಳಲ್ಲಿ ರಿಯಾಧ್ ಪಾಕಿಸ್ತಾನಕ್ಕೆ ಒದಗಿಸಿತು. 2018 ನವೆಂಬರ್​ನಲ್ಲಿ ಎರಡೂ ದೇಶಗಳ ನಡುವೆ ಆದ ಒಪ್ಪಂದದ ಪ್ರಕಾರ ಆರ್ಥಿಕ ಸಂಕಷ್ಟದಲ್ಲಿದ್ದ ಪಾಕಿಸ್ತಾನಕ್ಕೆ ಮೂರು ಬಿಲಿಯನ್ ಡಾಲರ್​ಗಳ ಸಾಲ ನೀಡಿದ ರಿಯಾಧ್, ಮತ್ತಷ್ಟು ಉದಾರತೆ ತೋರಿ ತನ್ನಿಂದ 3.2 ಬಿಲಿಯನ್ ಡಾಲರ್ ಮೌಲ್ಯದ ತೈಲವನ್ನು ಖರೀದಿಸುವ ಹಾಗೂ ಆ ಮೊತ್ತವನ್ನು ಪುಟ್ಟಪುಟ್ಟ ಕಂತುಗಳಲ್ಲಿ ನಿಧಾನವಾಗಿ ತೀರಿಸುವ ಅವಕಾಶವನ್ನು ಇಸ್ಲಾಮಾಬಾದ್​ಗೆ ನೀಡಿತು. ವಿಶ್ವಸಂಸ್ಥೆಯ ಸಮಾವೇಶಕ್ಕಾಗಿ ನ್ಯೂಯಾರ್ಕ್​ಗೆ ಪಯಣಿಸಲು ಇಮ್ರಾನ್ ಖಾನ್​ಗೆ ತಮ್ಮದೊಂದು ಸ್ವಂತ ವಿಮಾನವನ್ನು ಸೌದಿ ಅರಸ ಮಹಮದ್ ಬಿನ್ ಸಲ್ಮಾನ್​ಅಲ್ ಸೌದ್ ಒದಗಿಸಿದರು. ಇದೆಲ್ಲ ಸಹಕಾರಕ್ಕೆ ಇಮ್ರಾನ್ ಪ್ರತಿಕ್ರಿಯಿಸಿದ್ದು ಹೇಗೆ?

ಸೌದಿ ವಿಮಾನದಲ್ಲಿ ನ್ಯೂಯಾರ್ಕ್​ಗೆ ತಲುಪಿದ ಇಮ್ರಾನ್ ಅಲ್ಲಿ ಇರಾನ್, ಟರ್ಕಿ ಮತ್ತು ಮಲೇಷ್ಯಾಗಳ ನಾಯಕರ ಜತೆ ಖಾಸಗಿ ಮಾತುಕತೆಗಿಳಿದರು ಮತ್ತು ಆ ದೇಶಗಳ ಜತೆ ಸೇರಿ ಇಸ್ಲಾಮಿಕ್ ದೂರದರ್ಶನ ವಾಹಿನಿಯೊಂದನ್ನು ಆರಂಭಿಸುವ ಬಗ್ಗೆ ರ್ಚಚಿಸಿದರು. ಇರಾನ್ ಪ್ರಮುಖವಾಗಿ ಭಾಗಿಯಾಗಿರುವ ವಾರ್ತಾವಾಹಿನಿ ಎಂದರೆ ಅದು ಸೌದಿ ಅರೇಬಿಯಾದ ವಿರುದ್ಧ ಪ್ರಚಾರದ ಸಾಧನವಷ್ಟೇ ಎಂಬುದು ಇಮ್ರಾನ್ ಅರಿಯದ ಸತ್ಯವೇನಾಗಿರಲಿಲ್ಲ.

1979ರ ಇಸ್ಲಾಮಿಕ್ ಕ್ರಾಂತಿ ನಂತರ ಇರಾನ್ ಮುಸ್ಲಿಂ ಜಗತ್ತಿನ ನಾಯಕನ ಸ್ಥಾನಕ್ಕಾಗಿ ಸೌದಿ ಅರೇಬಿಯಾದ ಜತೆ ಸೆಣಸಾಟಕ್ಕಿಳಿಯಿತಷ್ಟೇ. ಆದರೆ ಸುನ್ನಿ ಪ್ರಾಬಲ್ಯದ ಮುಸ್ಲಿಂ ಜಗತ್ತಿನಲ್ಲಿ ಶಿಯಾ ಇರಾನ್ ಪರವಾಗಿ ನಿಲ್ಲುವವರು ಯಾರೂ ಇರಲಿಲ್ಲ. ಹತಾಶೆಗೊಂಡ ಇರಾನೀ ಧರ್ಮಗುರುಗಳು ಮೊದಲಿಗೆ ಪ್ಯಾಲೆಸೆôನ್, ಲೆಬನಾನ್ ಮತ್ತು ನಂತರ ಸಿರಿಯಾದಲ್ಲಿ ಶಿಯಾ ಭಯೋತ್ಪಾದಕ ಸಂಘಟನೆಗಳನನ್ನು ಹುಟ್ಟುಹಾಕಿ ಪೋಷಿಸುವುದರಲ್ಲಿ ತೊಡಗಿದರು. ದಶಕದ ಹಿಂದೆ ಅರಬ್ ಜಗತ್ತಿನಲ್ಲಿ ‘ಅರಬ್ ವಸಂತ’ ಎಂದು ಹೆಸರಾದ ಪ್ರಜಾಪ್ರಭುತ್ವದ ಗಾಳಿ ಬೀಸತೊಡಗಿದ ಸಮಯದಲ್ಲಿ ಬಹರೀನ್ನಂಥ ಅರಬ್ ದೇಶಗಳಲ್ಲಿನ ಶಿಯಾಗಳನ್ನು ಅಲ್ಲಿನ ಸುನ್ನಿ ಪ್ರಭುತ್ವದ ವಿರುದ್ಧ ಬಂಡೇಳುವಂತೆ ಪ್ರೇರೇಪಿಸುವ ಪ್ರಯತ್ನವನ್ನು ಇರಾನ್ ಮಾಡಿತು. ಜತೆಗೆ, ಈಶಾನ್ಯ ಸೌದಿ ಅರೇಬಿಯಾದಲ್ಲಿನ ಶಿಯಾಗಳನ್ನೂ ರಿಯಾಧ್ ಸರ್ಕಾರದ ವಿರುದ್ಧ ಎತ್ತಿಕಟ್ಟುವ ದುಸ್ಸಾಹಸಕ್ಕೂ ಇಳಿಯಿತು. ಇದರಿಂದಾಗಿ, ಸೌದಿ ಅರೇಬಿಯಾ ಮತ್ತು ಇರಾನ್ ನಡುವೆ ಮೊದಲೇ ಇದ್ದ ಜನಾಂಗೀಯ ಹಾಗೂ ಧಾರ್ವಿುಕ ದ್ವೇಷ ಮತ್ತಷ್ಟು ಉಲ್ಬಣಿಸಿದೆ. ಇನ್ನು ಟರ್ಕಿಯ ಬಗ್ಗೆ ಹೇಳುವುದಾದರೆ ಆ ದೇಶ ಸುನ್ನಿ ರಾಷ್ಟ್ರವಾದರೂ ಜನಾಂಗೀಯವಾಗಿ ಅದು ಅರಬ್ ಪಾಳಯದ್ದಲ್ಲ. ಹೀಗಾಗಿ ಟರ್ಕಿ ಮತ್ತು ಸೌದಿ ಅರೇಬಿಯಾಗಳ ನಡುವೆ ವಿಶ್ವಾಸ ಯಾವತ್ತೂ ಇರಲಿಲ್ಲ. ಇತ್ತೀಚಿನ ದಿನಗಳಲ್ಲಂತೂ ಟರ್ಕಿಯ ಅಧ್ಯಕ್ಷ ಐಲುದೊರೆ ರೆಸೆಪ್ ತಯ್ಯಿಪ್ ಎರ್ದೋಗನ್ ತನ್ನ ಹುಚ್ಚಾಟಗಳಿಂದಾಗಿ ಗ್ರೀಸ್, ರಷ್ಯಾ, ಇರಾಕ್ ಸೇರಿ ಸುತ್ತಲಿನ ಎಲ್ಲ ದೇಶಗಳ ವಿರೋಧ ಕಟ್ಟಿಕೊಂಡಿದ್ದಾರೆ. ಹೊರಜಗತ್ತು ಎರ್ದೋಗನ್​ರನ್ನು ನೋಡುವುದು ಶಾಂತಿಕಂಟಕ ಎಂದೇ. ಎರ್ದೋಗೆನ್ ಟರ್ಕಿಯನ್ನು ಕಟ್ಟಾ ಸುನ್ನಿ ಮುಸ್ಲಿಂ ರಾಷ್ಟ್ರವನ್ನಾಗಿಸಲು ಹೊರಟಿದ್ದಾರೆ ಮತ್ತು ಸುನ್ನಿ ಇಸ್ಲಾಮಿಕ್ ಜಗತ್ತಿನ ನಾಯಕತ್ವಕ್ಕಾಗಿ ಸೌದಿ ಅರೇಬಿಯಾದೊಂದಿಗೆ ಸೆಣಸಾಟಕ್ಕಿಳಿಯುವ ಸೂಚನೆಯನ್ನೂ ನೀಡಿದ್ದಾರೆ.

ಇಂಥ ಸನ್ನಿವೇಶದಲ್ಲಿ, ತನ್ನ ವಿರೋಧಿಗಳಾದ ಇರಾನ್ ಮತ್ತು ಟರ್ಕಿ ಜತೆ ಪಾಕಿಸ್ತಾನ ಕೈಜೋಡಿವುದನ್ನು ರಿಯಾಧ್ ಹೇಗೆ ತಾನೆ ಸಹಿಸುತ್ತದೆ? ಅದೂ ಪಾಕ್ ಪ್ರಧಾನಿ ತಾನು ಕೊಟ್ಟಿರುವ ವಿಮಾನದಲ್ಲಿ ನ್ಯೂಯಾರ್ಕ್ ತಲುಪಿ! ಅರಸ ಮಹಮದ್ ಬಿನ್ ನೀಡಿದ್ದ ವಿಮಾನವನ್ನು ಹಿಂತೆಗೆದುಕೊಂಡರು. ಪರಿಣಾಮವಾಗಿ ಪಾಕ್ ಪ್ರಧಾನಿ ನಾಗರಿಕ ವಿಮಾನವೊಂದರಲ್ಲಿ ಸಾಮಾನ್ಯ ಪ್ರಯಾಣಿಕನಂತೆ ಸ್ವದೇಶಕ್ಕೆ ಹಿಂತಿರುಗಬೇಕಾಯಿತು!

ಇಮ್ರಾನ್ ಖಾನ್​ರ ಅವಿವೇಕಿ ನೀತಿಗಳು ಇಷ್ಟಕ್ಕೇ ನಿಲ್ಲಲಿಲ್ಲ. ಕಳೆದ ಡಿಸೆಂಬರ್​ನಲ್ಲಿ ಅದೇ ಇರಾನ್, ಟರ್ಕಿ, ಮಲೇಷ್ಯಾಗಳ ನೇತಾರರು ಕೌಲಾಲಂಪುರದಲ್ಲಿ ಒಟ್ಟಿಗೆ ಸೇರಹೊರಟಾಗ ತಾವೂ ಅಲ್ಲಿಗೆ ಹೊರಡುವ ತಯಾರಿ ಮಾಡಿಕೊಂಡ ಖಾನ್ ಸೌದಿ ಅರೇಬಿಯಾ ಒಡ್ಡಿದ ಬೆದರಿಕೆಗೆ ಮಣಿದು ಕೊನೇಗಳಿಗೆಯಲ್ಲಿ ಪ್ರಯಾಣ ರದ್ದುಗೊಳಿಸಿದರೇನೋ ನಿಜ. ಆದರೆ, ಕೌಲಾಲಂಪುರ ಸಮಾವೇಶಕ್ಕೆ ಹೋಗಲಾಗದ್ದರ ಬಗ್ಗೆ ತಮಗೆ ಖೇದವಿರುವುದಾಗಿ ಫೆಬ್ರವರಿಯಲ್ಲಿ ಸಾರ್ವಜನಿಕವಾಗಿ ಹೇಳಿಕೊಂಡರು. ಸೌದಿ ಅರೇಬಿಯಾ ಬಗೆಗಿನ ಅವರ ನಕಾರಾತ್ಮಕ ಭಾವನೆ ಢಾಳಾಗಿ ವ್ಯಕ್ತವಾದ ಈ ಬಗೆಯನ್ನು ರಿಯಾಧ್ ಗುರುತಿಸದಿರಲಿಲ್ಲ. 2018 ನವೆಂಬರ್​ನಲ್ಲಿ ಪಾಕಿಸ್ತಾನಕ್ಕೆ ಪೆಟ್ರೋಲ್ ಪೂರೈಕೆಯ ಬಗ್ಗೆ ಮಾಡಿಕೊಂಡಿದ್ದ ಒಪ್ಪಂದ ಇದೇ ಜೂನ್​ನಲ್ಲಿ ಮುಗಿಯುತ್ತಿದ್ದಂತೆ ಅದನ್ನು ನವೀಕರಿಸಲು ರಿಯಾಧ್ ನಿರಾಕರಿಸಿತು. ಅಂದರೆ ಹಣ ಪಾವತಿಸಿದರೆ ಮಾತ್ರ ಪೆಟ್ರೋಲ್ ಎಂದು ರಿಯಾಧ್ ಇಸ್ಲಾಮಾಬಾದ್​ಗೆ ಖಡಕ್ಕಾಗಿ ಸೂಚಿಸಿತು.

ಬುದ್ಧಿವಂತರಿಗೆ ಇಷ್ಟು ಸಾಕು. ಆದರೆ ಪಾಕ್ ಆಳಅರಸರು ಬುದ್ಧಿವಂತರಲ್ಲ ಎನ್ನುವುದಕ್ಕೆ ಉದಾಹರಣೆಗಳು ಮತ್ತೆಮತ್ತೆ ಕಾಣತೊಡಗಿದವು. ಇದೇ ತಿಂಗಳ ಮೊದಲವಾರದಲ್ಲಿ ವಾರ್ತಾವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿದೇಶಮಂತ್ರಿ ಶಾ ಮೆಹಮೂದ್ ಖುರೇಶಿ, ‘ಕಾಶ್ಮೀರಕ್ಕೆ ಸಂಬಂಧಿಸಿ ಓಐಸಿ ಸಮಾವೇಶ ಕರೆಯದಿದ್ದರೆ ಮತ್ತು ಅಲ್ಲಿ ಭಾರತವನ್ನು ತರಾಟೆಗೆ ತೆಗೆದುಕೊಳ್ಳದೇ ಇದ್ದರೆ, ತಮ್ಮ ಪರವಾಗಿರುವ ಮುಸ್ಲಿಂ ದೇಶಗಳ ಸಮಾವೇಶವನ್ನು ತಾವೇ ಆಯೋಜಿಸುತ್ತೇವೆ’ ಎಂದು ಸೌದಿ ಅರೇಬಿಯಾಗೆ ಬೆದರಿಕೆ ಒಡ್ಡಿದರು. ಸೌದಿ ನಾಯಕತ್ವದ ಓಐಸಿಯನ್ನು ಒಡೆಯವ ಉದ್ಧಟತನ ಅದು.

ಕಾಶ್ಮೀರ ವಿಷಯ ರ್ಚಚಿಸಲು ಓಐಸಿ ಸಮಾವೇಶ ಕರೆಯಲು ಸೌದಿ ಅರೇಬಿಯಾಗಾಗಲೀ, ಇತರ ಪ್ರಮುಖ ಮುಸ್ಲಿಂ ದೇಶಗಳಿಗಾಗಲೀ ಈಗ ಆಸಕ್ತಿಯಿಲ್ಲ. ಮೋದಿ ಸರ್ಕಾರದ ರಾಜತಂತ್ರ ನಡೆಯಿಂದ ಅವೆಲ್ಲವೂ ಭಾರತದ ಪರವಾಗಿ ಬದಲಾಗಿವೆ. ಹೀಗಾಗಿ, ಖುರೇಶಿ ಧಮಕಿಗೆ ಬದಲಾಗಿ ತಪರಾಕಿ ನೀಡಿದ ರಿಯಾಧ್, ತಾನು ನೀಡಿದ್ದ ಮೂರು ಬಿಲಿಯನ್ ಡಾಲರ್ ಸಾಲದಲ್ಲಿ ಒಂದು ಬಿಲಿಯನ್ ಅನ್ನು ತಕ್ಷಣ, ಗಡುವಿಗೆ ನಾಲ್ಕು ತಿಂಗಳಿಗೂ ಮೊದಲೇ, ಹಿಂತಿರುಗಿಸುವಂತೆ ಒತ್ತಾಯಿಸಿತು. ಅಷ್ಟು ಮೊತ್ತವನ್ನು ಚೀನಾದಿಂದ ಸಾಲವಾಗಿ ಪಡೆದು ಪಾಕಿಸ್ತಾನ ಸೌದಿಗೆ ನೀಡಿದರೂ, ತಿಂಗಳ ಅಂತ್ಯದೊಳಗೆ ಇನ್ನೊಂದು ಬಿಲಿಯನ್ ಡಾಲರ್ ಹಿಂತಿರುಗಿಸುವಂತೆ ಮತ್ತೆ ಒತ್ತಾಯಿಸಿದೆ.

ಸಿಟ್ಟುಗೊಂಡ ಸೌದಿಗಳನ್ನು ಸಮಾಧಾನಿಸಲು ಪಾಕ್ ಸೇನಾನಾಯಕ ಜನರಲ್ ಕಮರ್ ಜಾವೆದ್ ಬಾಜ್ವಾ ಇದೇ 18ರಂದು ರಿಯಾಧ್​ಗೆ ಓಡಿದರು. ಆದರೆ ಅವರನ್ನು ಭೇಟಿಯಾಗಲು ಅರಸ ಮಹಮದ್ ಬಿನ ಉಸ್ಮಾನ್ ನಿರಾಕರಿಸಿದರು. ಕಂಗೆಟ್ಟ ಪಾಕಿಸ್ತಾನ ಮತ್ತೆ ಚೀನಾದ ಮುಂದೆ ಕೈಯೊಡ್ಡಿತು. ಇದೇ 21ರಂದು ಚೀನಾಗೆ ಧಾವಿಸಿದ ವಿದೇಶಮಂತ್ರಿ ಖುರೇಶಿಯವರನ್ನು ಸ್ವಾಗತಿಸಲು ವಿಮಾನನಿಲ್ದಾಣಕ್ಕೆ ಯಾವೊಬ್ಬ ಚೀನೀ ನಾಯಕನಾಗಲೀ, ಅಧಿಕಾರಿಯಾಗಲೀ ಬರಲಿಲ್ಲ. ಬಂದದ್ದು ಒಬ್ಬ ಚಾಲಕ ಮಾತ್ರ! ನಂತರ ಚೀನೀ ವಿದೇಶಮಂತ್ರಿ ವಾಂಗ್ ಯಿ ಜತೆ ಖುರೇಶಿಯವರ ಮಾತುಕತೆಯೇನೋ ನಡೆಯಿತು. ಆದರೆ, ವರದಿಗಳ ಪ್ರಕಾರ, ಎರಡು ಬಿಲಿಯನ್ ಡಾಲರ್ ಸಾಲಕ್ಕಾಗಿ ಖುರೇಶಿ ಇತ್ತ ಬೇಡಿಕೆಯನ್ನು ಪುರಸ್ಕರಿಸಲು ವಾಂಗ್ ಯಿ ನಿರಾಕರಿಸಿದರು!

ಮತಿಗೆಟ್ಟ ನಾಯಕರನ್ನು ಹೊಂದಿದ ದೇಶವೊಂದು ಎಂತಹ ಮಟ್ಟಕ್ಕೆ ಗತಿಗೆಟ್ಟು ಹೋಗಬಹುದೆಂಬುದಕ್ಕೆ ಪಾಕಿಸ್ತಾನ ಒಂದು ಉದಾಹರಣೆಯಾಗಿ ಜಗತ್ತಿನ ಮುಂದೆ ನಿಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net