

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ "ವಿಕ್ರಾಂತ್ ರೋಣ" ಸಿನಿಮಾದಲ್ಲಿ ಸೊಂಟ ಬಳುಕಿಸಲು ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಶುಕ್ರವಾರ ಬೆಂಗಳೂರಿಗೆ ಬಂದಿಳಿದಿದ್ದಾರೆ.
ವಿಕ್ರಾಂತ್ ರೋಣ ಚಿತ್ರದ ವಿಶೇಷ ಹಾಡೊಂದರಲ್ಲಿ ಫರ್ನಾಂಡಿಸ್ ನಟ ಕಿಚ್ಚ ಸುದೀಪ್ ಜತೆ ಹೆಜ್ಜೆ ಹಾಕಲಿದ್ದಾರೆ. ನೆಲಮಂಗಲದ ಬಳಿ ಇರುವ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಈ ಹಾಡಿಗಾಗಿ ವಿಶೇಷ ಸೆಟ್ವೊಂದರ ನಿರ್ಮಾಣ ಮಾಡಲಾಗಿದ್ದು, ಅಲ್ಲಿ ಚಿತ್ರೀಕರಣ ನಡೆಯುತ್ತಿದೆ. ಹಾಡಲ್ಲದೆ ಒಂದು ಪ್ರಮುಖ ದೃಶ್ಯದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ಒಂದು ವಾರ ಕಾಲ ಅವರು ಚಿತ್ರೀಕರಣದಲ್ಲಿ ಭಾಗವಹಿಸಿ, ಮುಂಬೈಗೆ ವಾಪಸ್ಸಾಗಲಿದ್ದಾರೆ.
ಚಿತ್ರತಂಡ ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲೂ ನಿರತವಾಗಿದೆ. ಇದರ ನಡುವೆ ಕೋವಿಡ್ನಿಂದ ಹಾಡೊಂದರ ಚಿತ್ರೀಕರಣ ಬಾಕಿ ಉಳಿದಿತ್ತು. ಇದೀಗ ಲಾಕ್ಡೌನ್ ತೆರೆದಿರುವುದರಿಂದ ಹಾಡಿನ ಚಿತ್ರೀಕರಣ ಶುರುವಾಗಲಿದ್ದು, ಅದಕ್ಕಾಗಿ ಫರ್ನಾಂಡಿಸ್ ಬೆಂಗಳೂರಿಗೆ ಬಂದಿದ್ದಾರೆ.
ಈ ಹಾಡಿನ ಶೂಟಿಂಗ್ ಮುಗಿದ್ರೆ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಲಿದೆ. ಈಗಾಗಲೇ ಡಬ್ಬಿಂಗ್ ಕೆಲಸಗಳೂ ಸಹ ಮುಗಿದಿವೆ. ವಿಕ್ರಾಂತ್ ರೋಣ ಸಿನಿಮಾ ನಟ ಸುದೀಪ್ ಸಿನಿ ಕೆರಿಯರ್ನಲ್ಲೇ ವಿಭಿನ್ನ ಸಿನಿಮಾ ಆಗಿರಲಿದೆ. ಭಾರತ ಮಾತ್ರವಲ್ಲದೇ ವಿದೇಶಿ ಭಾಷೆಗಳಲ್ಲೂ ಚಿತ್ರ ತೆರೆಕಾಣಲಿದ್ದು, ಇದನ್ನು ಪ್ಯಾನ್ ವರ್ಲ್ಡ್ ಸಿನಿಮಾ ಎಂದು ಪರಿಗಣಿಸಲಾಗಿದೆ. ಈಗಾಗಲೇ ಚಿತ್ರದ ಬಗ್ಗೆ ಅನೇಕ ಘಟಾನುಘಟಿಯರು ಧನಾತ್ಮಕವಾಗಿ ಮಾತನಾಡಿದ್ದು, ಚಿತ್ರದ ಮೇಲಿನ ನಿರೀಕ್ಷೆ ನೂರ್ಮಡಿಯಾಗಿದೆ.
ಚಿತ್ರವನ್ನು ರಂಗಿತರಂಗ ಖ್ಯಾತಿ ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಜಾಕ್ ಮಂಜು ಬಂಡವಾಳವನ್ನು ಹೂಡಿದ್ದಾರೆ. ಕರೊನಾ ಎರಡನೇ ಅಲೆ ಬರದೇ ಹೋಗಿದ್ದರೆ ಮುಂದಿನ ತಿಂಗಳು ಅಂದರೆ ಆಗಸ್ಟ್ 19ರಂದು ಚಿತ್ರ ತೆರೆಕಾಣಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಇನ್ನು ಮುಚ್ಚಿರುವ ಕಾರಣ ವಿಕ್ರಾಂತ್ ರೋಣ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಲಿದೆ.