ರಾಕ್​ಲೈನ್ ವೆಂಕಟೇಶ್ ಮನೆಗೆ ಜೆಡಿಎಸ್ ಬೆಂಬಲಿಗರ ಮುತ್ತಿಗೆ ಯತ್ನ, ಸುಮಲತಾ ಮನೆಗೂ ಬಂದೋಬಸ್ತ್​

jds protest
Published on

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ನಡುವಿನ ರಾಜಕೀಯ ಸಮರ ತಾರಕಕ್ಕೇರಿದ್ದು, ಪರ-ವಿರೋಧ ಪರಾಕಾಷ್ಠೆ ತಲುಪಿದೆ. ಸಿನಿಮಾ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ನಿವಾಸಕ್ಕೆ ಇಂದು ಬೆಳ್ಳಂಬೆಳಗ್ಗೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಕುಮಾರಸ್ವಾಮಿ ವಿರುದ್ಧ ರಾಕ್​ಲೈನ್​ ವೆಂಕಟೇಶ್​ ನಿನ್ನೆ ಹೇಳಿಕೆ ನೀಡಿದ್ದರು. ಇದಕ್ಕೆ ಗರಂ ಆದ ಜೆಡಿಎಸ್​ ಕಾರ್ಯಕರ್ತರು, ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನಲ್ಲಿರುವ ರಾಕ್‍ಲೈನ್ ವೆಂಕಟೇಶ್ ನಿವಾಸದ ಮುಂದೆ ಶನಿವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ್ದಾರೆ. ಅಂಬರೀಶ್ ಬಗ್ಗೆ ನಮಗೂ ಅಭಿಮಾನವಿದೆ. ಕುಮಾರಸ್ವಾಮಿ ಬಗ್ಗೆ ಮಾತಾಡೋಕೆ ನೀವು ಯಾರು? ಈ ಕೂಡಲೇ ಕುಮಾರಸ್ವಾಮಿ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ರಾಕ್​ಲೈನ್​ ವೆಂಕಟೇಶ್​ ಮತ್ತು ಸುಮಲತಾ ಮನೆಗೆ ಬಿಗಿ ಭದ್ರತೆ ನೀಡಿದ್ದಾರೆ.

ರಾಕ್​ಲೈನ್​ ಹೇಳಿದ್ದೇನು?: ‘ನನ್ನ ಮತ್ತು ಸುಮಲತಾ ​ಬಗ್ಗೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ ಯತ್ನಿಸಿದ್ದರು. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ನಕಲಿ ವಿಡಿಯೋ ಸೃಷ್ಟಿಸಿ ನನ್ನ ಮತ್ತು ಸುಮಲತಾ ಅವರ ತೇಜೋವಧೆ ಮಾಡಲು ಹೊರಟಿದ್ದರು, ಸುಮಲತಾ ಅವರ ಹೆಸರಿಗೆ ಮಸಿ ಬಳಿಯಲು ಯತ್ನಿಸಿದ್ದರು. ಚುನಾವಣೆಯ ವೇಳೆ ಚುನಾವಣಾ ಪ್ರಚಾರಕ್ಕಾಗಿ ನಾವೆಲ್ಲರೂ ಹೋಟೆಲ್‌ನಲ್ಲಿದ್ದೆವು. ಆಗ ನಾನು ಮತ್ತು ಸುಮಲತಾ ಹೋಟೆಲ್‌ಗೆ ತೆರಳುತ್ತಿದ್ದ ದೃಶ್ಯಗಳನ್ನು ಹೋಟೆಲ್‌ನ ಸಿಸಿ ಕ್ಯಾಮರಾದಿಂದ ಪಡೆದು ಆ ದೃಶ್ಯಗಳ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದರು. ಚುನಾವಣೆ ವೇಳೆ ಸುಮಲತಾ ಅವರ ಹೆಗಲಿಗೆ ಯಾರೋ ಕೈ ಹಾಕಿದ್ದ ಫೋಟೋ ಬಳಸಿಕೊಂಡು ನಾನು ಮತ್ತು ಸುಮಲತಾ ಅವರು ಹೋಟೆಲ್ ಕಾರಿಡಾರ್ ಮೂಲಕ ರೂಂಗೆ ಇಬ್ಬರೇ ಹೋಗುತ್ತೇವೆ ಎಂದು ಅಶ್ಲೀಲ ಚಿತ್ರಗಳನ್ನು ತಂದು ಪೇಸ್ಟ್ ಮಾಡಿ ನಕಲಿ ವಿಡಿಯೋ ಸೃಷ್ಟಿಸಿ ಚುನಾವಣೆ ಸಂದರ್ಭದಲ್ಲಿ ಹರಿಬಿಡಲು ಆಸೆಪಟ್ಟಿದ್ದರು. ಅವರ ಚಾನೆಲ್‌ನಲ್ಲಿದ್ದ ಅಂಬರೀಶ್‌ ಅವರ ಅಭಿಮಾನಿಯೇ ಇದನ್ನು ನನಗೆ ಹೇಳಿದ್ದರು'' ಎಂದು ರಾಕ್‌ಲೈನ್ ಗಂಭಿರ ಆರೋಪ ಮಾಡಿದ್ದರು.

''ಅವತ್ತು ಅಂಬಿ ಮುಂದೆ 000.5 ವಾಲ್ಯೂಮ್‍ನಲ್ಲಿ ಕುಮಾರಸ್ವಾಮಿ ಮಾತಾಡ್ತಿದ್ದರು. ಇವತ್ತು ಯಾವ್ ಟೋನ್‍ನಲ್ಲಿ ಮಾತಾಡ್ತಿದ್ದೀರಾ. ಇದೆಲ್ಲ ಬೇಡ. ಅಂಬರೀಶ್ ಸ್ಮಾರಕ ವಿಚಾರ ಕೇಳೋಕೆ ಹೋದಾಗ ಎರಡೂವರೆ ಗಂಟೆ ಕಾಲ ಕುಮಾರಸ್ವಾಮಿ ನಮ್ಮನ್ನು ಕಾಯಿಸಿದ್ದರು. ದೊಡ್ಡಣ್ಣ ಕೊಟ್ಟ ಮನವಿ ಪತ್ರವನ್ನ ಮುಖದ ಮೇಲೆ ಬಿಸಾಕಿದ್ರಿ. ಇವನು ಏನ್ ಮಾಡಿದ್ದಾನೇ..ಯಾಕ್ರಿ ಸ್ಮಾರಕ ಮಾಡಬೇಕು ಇವನಿಗೆ ಅಂತ ಕುಮಾರಸ್ವಾಮಿ ಅವಮಾನ ಮಾಡಿದ್ರು'' ಎಂದು ಬಾಂಬ್​ ಸಿಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net