

ರಾಂಚಿ: ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಮತ್ತೆ 88 ರನ್ ಪೇರಿಸಿ ಮೊದಲ ಇನಿಂಗ್ಸ್ ಹಿನ್ನಡೆಯನ್ನು ಭಾರಿ ಪ್ರಮಾಣದಲ್ಲಿ ತಗ್ಗಿಸುವಲ್ಲಿ 23 ವರ್ಷದ ಧ್ರುವ ಜುರೆಲ್ ಮಹತ್ವದ ಪಾತ್ರ ನಿರ್ವಹಿಸಿದರು. ಶತಕವಂಚಿತರಾದ ಜುರೆಲ್ 90 ರನ್ಗಳ ಇನಿಂಗ್ಸ್ನಲ್ಲಿ ಅರ್ಧಶತಕ ಪೂರೈಸಿದಾಗ ಸೆಲ್ಯೂಟ್ ಹೊಡೆದು ಸಂಭ್ರಮಿಸಿದರು. ಇದರ ಹಿಂದಿನ ಅರ್ಥವೇನು ಗೊತ್ತೇ?
ಧ್ರುವ ಜುರೆಲ್ ಚೊಚ್ಚಲ ಅರ್ಧಶತಕ ಪೂರೈಸಿದ ಬೆನ್ನಲ್ಲೇ ಸೆಲ್ಯೂಟ್ ಹೊಡೆಯುವ ಮೂಲಕ 1999ರ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಯೋಧರಾಗಿರುವ ತಂದೆ ನೇಮ್ ಚಂದ್ಗೆ ಗೌರವ ಸಲ್ಲಿಸಿದರು. ಪಂದ್ಯಕ್ಕೆ ಮುನ್ನ ತಂದೆ ತನ್ನ ಬಳಿ ಇಂಥದ್ದೊಂದು ಕೋರಿಕೆಯನ್ನು ಇರಿಸಿದ್ದರು. ನನಗಾಗಿ ಎಲ್ಲವನ್ನೂ ಮಾಡಿರುವ ಅವರಿಗೆ ಈ ಸೆಲ್ಯೂಟ್ ಅರ್ಪಣೆ ಎಂದು 23 ವರ್ಷದ ಧ್ರುವ ಜುರೆಲ್ ದಿನದಾಟದ ಬಳಿಕ ಹೇಳಿಕೊಂಡರು. ಶತಕ ತಪ್ಪಿದ ಬಗ್ಗೆ ಬೇಸರವೂ ನನಗಿಲ್ಲ. ತಂಡಕ್ಕಾಗಿ ಉತ್ತಮ ಕೊಡುಗೆ ನೀಡಿದ ಸಮಾಧಾನವಿದೆ ಎಂದೂ ಅವರು ಹೇಳಿದ್ದಾರೆ.
ಜುರೆಲ್ ಕ್ರೀಸ್ಗೆ ಇಳಿದಾಗ ಭಾರತ 161 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು ಮತ್ತು ಇನ್ನೂ 192 ರನ್ ಹಿನ್ನಡೆಯಲ್ಲಿತ್ತು. ಅವರು ಕ್ರೀಸ್ನಲ್ಲಿದ್ದಾಗಲೇ ಭಾರತ ಸ್ರಾರ್ಜ್ ಖಾನ್ ಮತ್ತು ಅಶ್ವಿನ್ ವಿಕೆಟ್ ಕಳೆದುಕೊಂಡು ಇನ್ನಷ್ಟು ದುಸ್ಥಿತಿ ತಲುಪಿತ್ತು. ಆಗ ಕುಲದೀಪ್ ಜತೆಗೂಡಿ 8ನೇ ವಿಕೆಟ್ಗೆ ಆಸರೆಯಾದ ಜುರೆಲ್, 2ನೇ ದಿನದಂತ್ಯದಲ್ಲೇ 42 ರನ್ ಸೇರಿಸಿದ್ದರು. 3ನೇ ದಿನ ಬೆಳಗ್ಗೆ ಈ ಜತೆಯಾಟವನ್ನು 76 ರನ್ಗಳಿಗೆ ವಿಸ್ತರಿಸಿದರು.
ಜುರೆಲ್ಗೆ ಸಮರ್ಥ ಸಾಥ್ ನೀಡಿದ ಕುಲದೀಪ್ (28) ದಿನದ 16ನೇ ಓವರ್ನಲ್ಲಿ ಆಂಡರ್ಸನ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಆಕಾಶ್ ದೀಪ್ (9) ಜತೆ 9ನೇ ವಿಕೆಟ್ಗೆ 40 ರನ್ ಸೇರಿಸಿದ ಜುರೆಲ್, ಇದರಲ್ಲಿ 31ರನ್ಗಳನ್ನು ತಾವೇ ಗಳಿಸಿದರು. ಕೊನೆಯಲ್ಲಿ ಸಿರಾಜ್ ಜತೆಗೂಡಿ ಭಾರತದ ಮೊತ್ತವನ್ನು 300ರ ಗಡಿ ದಾಟಿಸಿದ ಜುರೆಲ್ ಚೊಚ್ಚಲ ಶತಕದಿಂದ ಕೇವಲ 10 ರನ್ ದೂರವಿದ್ದಾಗ ಹಾರ್ಟ್ಲಿ ಎಸೆತದಲ್ಲಿ ಬೌಲ್ಡಾದರು. ಇದರೊಂದಿಗೆ ಭಾರತದ ಇನಿಂಗ್ಸ್ ಮುಕ್ತಾಯಗೊಂಡರೂ, ಹಿನ್ನಡೆ ದೊಡ್ಡ ಪ್ರಮಾಣದಲ್ಲಿ ತಗ್ಗಿದ ಸಮಾಧಾನ ನೀಡಿದರು.