ನಾಡಿನ ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ: ಪದ್ಮರಾಜ ಎನ್.ದೇಸಾಯಿ ಅಭಿಮತ

award
Published on

ಬೆಂಗಳೂರು: ನಾಡಿನ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪದ್ಮರಾಜ ಎನ್.ದೇಸಾಯಿ ತಿಳಿಸಿದ್ದಾರೆ.

ಬಿಎಂಶ್ರೀ ಪ್ರತಿಷ್ಠಾನ, ಎನ್.ಆರ್.ಕಾಲನಿಯ ಬಿಎಂಶ್ರೀ ಕಲಾಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಕಂಬತ್ತಹಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಿನೇದಿನೆ ಸಂಸ್ಕೃತಿ, ಪರಂಪರೆ ನಶಿಸುತ್ತಿದೆ. ಇವುಗಳನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜೈನ ಸಾಹಿತ್ಯವನ್ನು ಬೆಳೆಸಲು ಕಾರಣೀಭೂತರಾದವರಿಗೆ ಪ್ರಶಸ್ತಿ ನೀಡುತ್ತಿರುವುದು ಗಮನಾರ್ಹ ಸಂಗತಿ. ಅಲ್ಲದೆ, ಪ್ರಶಸ್ತಿಗೆ ಇನ್ನಷ್ಟು ಮಹತ್ವವೂ ಸಿಕ್ಕಿದೆ. ಪ್ರಸಕ್ತ ದಿನಗಳಲ್ಲಿ ಜೈನ ಸಮಾಜದ ಚಿಂತನೆ, ಸಾಹಿತ್ಯ ಹಾಗೂ ಗ್ರಂಥ ಪುರಾಣಗಳನ್ನು ಪರಿಷ್ಕರಿಸಿ ಮನೆ, ಮನೆಗೆ ತಲುಪಿಸುತ್ತಿರುವ ಎಸ್.ಜಿತೇಂದ್ರ ಕುಮಾರ್ ಕಾರ್ಯವನ್ನು ಶ್ಲಾಘಿಸಿದರು.

’ಗೊಮ್ಮಟ ಸ್ತುತಿ’ ಪುಸ್ತಕ ಬಿಡುಗಡೆಗೊಳಿಸಿ ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಮಾತನಾಡಿ, ಚಾವುಂಡರಾಯ ಶ್ರವಣಬೆಳಗೊಳದಲ್ಲಿ ಭಗವಾನ್ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಸಂದರ್ಭದಲ್ಲಿ ಅವರ ಗುರುಗಳಾದ ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿಗಳು ರಚಿಸಿದ ಸ್ತುತಿ ಇದು ಎಂದು ಕಿರುಹೊತ್ತಿಗೆ ಕುರಿತು ಪರಿಚಯ ಮಾಡಿಕೊಟ್ಟರು.

ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್‌ಗೆ ‘ಕಂಬತ್ತಹಳ್ಳಿ ಜೀವಣ್ಣ ಪದ್ಮಾವತಮ್ಮ ದತ್ತಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಲೇಖಕಿ ಡಾ. ಪದ್ಮಿನಿ ನಾಗರಾಜು, ನಿವೃತ್ತ ಇಂಜಿನಿಯರ್ ಕೆ.ಜೆ. ಪಾಶ್ವನಾಥ್ ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net