

ಬೆಂಗಳೂರು: ವಿಶೇಷ ಸಂದರ್ಭಗಳಲ್ಲಿ ಸಚಿವರು, ನಾಯಕರು ಒಟ್ಟಿಗೆ ಸೇರಿ ಔತಣಕೂಟ ನಡೆಸುವುದು ಸಾಮಾನ್ಯ. ಇದಕ್ಕೆ ರಾಜಕೀಯವಾಗಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್(DK Suresh) ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದರು.
ಡಿಸಿಎಂ ಅನುಪಸ್ಥಿತಿಯಲ್ಲಿ ಅನೇಕ ಡಿನ್ನರ್ ಸಭೆಗಳು ನಡೆಯುತ್ತಿವೆ ಎಂಬ ಪತ್ರಕರ್ತರ ಪ್ರಶ್ನೆಗೆ, ವಿಶೇಷ ಸಂದರ್ಭಗಳಲ್ಲಿ ಸ್ನೇಹಿತರು ಊಟಕ್ಕೆ ಸೇರುವುದು, ಹೀಗೆ ಊಟಕ್ಕೆ ಸೇರಿದಾಗ ಹಲವಾರು ಚರ್ಚೆ ಮಾಡುವುದು ಸರ್ವೇ ಸಾಮಾನ್ಯ. ಹೊಸ ವರ್ಷದ ಹಿನ್ನೆಲೆಯಲ್ಲಿ ಕೆಲವು ಸಚಿವರು, ನಾಯಕರು ಔತಣಕೂಟಕ್ಕೆ ಸೇರಿದ್ದರು. ಅದರಲ್ಲಿ ಮುಖ್ಯಮಂತ್ರಿಗಳು ಸೇರಿದ್ದಾರೆ. ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ.
ರಾಜಕಾರಣದಲ್ಲಿ ಮಾಧ್ಯಮಗಳು ಹೇಳುವ ರೀತಿ ವಿಶೇಷ ಬದಲಾವಣೆಗೆ ಒತ್ತಡ ಹಾಕಲಾಗುತ್ತಿದೆ ಎಂದು ಅರ್ಥ ಕಲ್ಪಿಸಲು ಸಾಧ್ಯವಿಲ್ಲ. ಇಂದು ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆ. ಅವರೇ ಔತಣಕೂಟದಲ್ಲಿ ಸೇರಿರುವಾಗ ಇದರಲ್ಲಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವೇನಿದೆ? ಎಂದು ತಿಳಿಸಿದರು.
ಪರಮೇಶ್ವರ್ ಅವರು ಪರಿಶಿಷ್ಟ ಜಾತಿ ಹಾಗೂ ಸಮುದಾಯದ ಸಚಿವರು ಹಾಗೂ ಶಾಸಕರ ಸಭೆ ಕರೆದಿದ್ದಾರೆ. ಸಭೆ ಕರೆಯಬಾರದು ಅಂತೇನಿಲ್ಲವಲ್ಲ? ಅವರೂ ಸಭೆ ಕರೆಯಬಹುದು, ನೀವು ಕರೆಯಬಹುದು, ನಾನೂ ಕರೆಯಬಹುದು. ಊಟಕ್ಕೆ ಕರೆಯುವುದರಲ್ಲಿ ಯಾವುದೇ ವಿಶೇಷ ಅರ್ಥ ಕಲ್ಪಿಸುವುದು ಬೇಡ.
ಪರಮೇಶ್ವರ್ ಅವರು ನಮ್ಮ ಹಿರಿಯ ನಾಯಕರು, ಗೃಹಮಂತ್ರಿಗಳು. ಅವರಿಗೆ ತಮ್ಮದೇ ಆದ ಒತ್ತಡಗಳಿವೆ. ಅವರ ಸಮುದಾಯದ ಶಾಸಕರು ಅವರ ಮುಂದೆ ಕೆಲವು ಬೇಡಿಕೆ ಇಟ್ಟಿರಬಹುದು. ಬಜೆಟ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೇಡಿಕೆ ಪೂರೈಸಲು ಚರ್ಚೆ ಮಾಡಬಹುದು. ಮತ್ತೊಂದು ಕಾಂತರಾಜು ಅವರ ವರದಿ ಬಗ್ಗೆ ಚರ್ಚೆ ಆರಂಭವಾಗಿವೆ. ಈ ಬಗ್ಗೆ ಚರ್ಚೆ ನಡೆಸಲು ಸಭೆ ಸೇರುವುದು ಸಾಮಾನ್ಯ ಎಂದು ತಿಳಿಸಿದರು.
ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಜನ ಕೊಟ್ಟ ತೀರ್ಪನ್ನು ಗೌರವಯುತವಾಗಿ ಸ್ವೀಕರಿಸಿದ್ದೇನೆ. ಈಗಾಗಲೇ ಸಿಎಂ ಸ್ಥಾನದಲ್ಲಿ ಒಬ್ಬರು ಕೂತಿದ್ದಾರೆ. ಪಕ್ಷದ ಅದ್ಯಕ್ಷ ಸ್ಥಾನದಲ್ಲಿ ಮತ್ತೊಬ್ಬರು ಕೂತಿದ್ದಾರೆ. ಆ ಸ್ಥಾನಗಳು ಖಾಲಿಯಾಗುವ ಸಂದರ್ಭದಲ್ಲಿ ಪಕ್ಷ ಅದರ ಬಗ್ಗೆ ಚರ್ಚೆ ಮಾಡಲಿದೆ.
ಏನೇ ತೀರ್ಮಾನ ಮಾಡಬೇಕಾದರೂ ನಮ್ಮ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ತೀರ್ಮಾನ ಮಾಡಬೇಕು. ಆಕಾಂಕ್ಷಿಗಳು ಇದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಶಿವಕುಮಾರ್ ಅವರೇ ಇರಬೇಕು ಎಂದೇನಿಲ್ಲ. ಅವರು ನಾಲ್ಕೈದು ವರ್ಷಗಳಿಂದ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತಂದಿದ್ದಾರೆ. ಆ ಹುದ್ದೆಗೆ ಸತೀಶ್ ಜಾರಕಿಹೊಳಿ, ರಾಜಣ್ಣ, ಪರಮೇಶ್ವರ್ ಅವರು ಮತ್ತೊಮ್ಮೆ ಆದರೂ ಸಂತೋಷ. ಈ ಸ್ಥಾನ ಅಲಂಕರಿಸಬೇಕು ಎಂದು ಬೇರೆ ಯಾರಿಗೆ ಆತುರವಿದೆಯೋ ಅವರೇ ಆದರೂ ಸಂತೋಷ.
ಯಾರೂ ಆಗಬಾರದು ಎಂಬುದೇನಿಲ್ಲ. ಪಕ್ಷದ ದೃಷ್ಟಿಯಿಂದ ಎಲ್ಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಬೇಕಾದ ಗುರುತರ ಜವಾಬ್ದಾರಿ ಎಲ್ಲಾ ನಾಯಕರ ಮೇಲಿದೆ. ಸಿದ್ದರಾಮಯ್ಯ ಅವರು ಬೇಕಾದರೂ ಅಧ್ಯಕ್ಷರಾಗಬಹುದು, ನಾನಂತೂ ಆಕಾಂಕ್ಷಿಯಲ್ಲ ಎಂದು ತಿಳಿಸಿದರು.