ಬೆಳ್ತಂಗಡಿ: ಹೋಮ, ವ್ರತದಿಂದ ವ್ಯಸನ ದೂರ ಮಾಡಲು ಆಗುವುದಿಲ್ಲ. ವ್ಯಸನ ನಿವಾರಿಸಿಕೊಳ್ಳಬೇಕಾದರೆ ಇದು ತನ್ನ ದೇಹಕ್ಕೆ ಮತ್ತು ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿದು ಮನಸಾರೆ ತಿರಸ್ಕರಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ, 231ನೇ ವಿಶೇಷ ಮದ್ಯವರ್ಜನ ಶಿಬಿರಕ್ಕೆ ಭೇಟಿ ನೀಡಿ 73 ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕುಡಿತಕ್ಕೆ ದಾಸನಾದಾತ ಕುಡಿಯಬಾರದೆಂದು ಎಷ್ಟು ಬಾರಿ ಕೊಡವಿದರೂ ಕುಡಿತ ಅವನನ್ನು ಬಿಡುವುದಿಲ್ಲ. ಮದ್ಯಪಾನ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಮುಂತಾದ ಪಂಚೇಂದ್ರಿಯಗಳಿಗೆ ದಾಸರನ್ನಾಗಿ ಮಾಡುತ್ತದೆ. ಅತ್ಯಂತ ಹೀನ, ಅನ್ಯಾಯದ ಕೆಲಸಗಳನ್ನು ಮಾಡಲು ಪ್ರೇರಣೆ ಕೊಡುತ್ತದೆ. ಎಲ್ಲ ಒಳ್ಳೆಯ ವಿಷಯಗಳನ್ನು ನುಂಗಿ ಹಾಕುತ್ತದೆ ಎಂದರು.
ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್, ಯೋಜನಾಧಿಕಾರಿ ಮಾಧವಗೌಡ, ಶಿಬಿರಾಧಿಕಾರಿ ವಿದ್ಯಾಧರ್, ಚಿತ್ತರಂಜನ್, ಆರೋಗ್ಯ ಸಹಾಯಕಿ ಫಿಲೋಮಿನಾ ಡಿಸೋಜ ಸಹಕರಿಸಿದರು. ಮುಂದಿನ ವಿಶೇಷ ಶಿಬಿರವು ಸೆ.23ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.
ಮನೆಯ ಹೆಣ್ಣುಮಕ್ಕಳಿಗೆ ಮಾರ್ಗದರ್ಶನ
ಶಿಬಿರದಲ್ಲಿ 8 ದಿನಗಳವರೆಗೆ ಇದ್ದು, ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿದರೆ ಮುಂದೆ ನಿಮ್ಮ ಭವಿಷ್ಯ ಬದಲಾಗುತ್ತದೆ. ಮುಂದೆ ಎಷ್ಟೇ ಆಕರ್ಷಣೆ ಬಂದರೂ, ಎಷ್ಟೇ ಒತ್ತಡ ಬಂದರೂ ಅದೇ ನಿಮ್ಮನ್ನು ಬಿಡುವಂತೆ ದೂರವಿರಬೇಕು. ಇಲ್ಲಿನ ವಿಶೇಷ ಶಿಬಿರಗಳಲ್ಲಿ ಗುಪ್ತವಾಗಿ ಮದ್ಯಪಾನ ಬಿಡಲು ಅವಕಾಶ ಕಲ್ಪಿಸಲಾಗಿದೆ. ಶಿಬಿರದ ಕೊನೇ ದಿನದಲ್ಲಿ ಶಿಬಿರಾರ್ಥಿಗಳಿಗೆ ಪ್ರೇರಣೆ ನೀಡಲು ಮತ್ತು ಸಂಸಾರದಲ್ಲಿ ಬೆಂಬಲವಾಗಿ ನಿಲ್ಲಲು ಕುಟುಂಬ ದಿನ ಕಾರ್ಯಕ್ರಮ ನಡೆಸಿ ಮನೆಯ ಹೆಣ್ಣುಮಕ್ಕಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಶಿಬಿರಾರ್ಥಿಗಳೆಲ್ಲರೂ ದುಶ್ಚಟ ದೂರ ಮಾಡಿ ಪರಿವರ್ತನೆಯ ಭಾಗ್ಯ ಪಡೆದುಕೊಳ್ಳಿ ಎಂದರು.