ಚಿತ್ರರಂಗದಲ್ಲಿ ವಯಸ್ಸಾಗೋದೇ ದೊಡ್ಡ ಪಾಪ ... ಶರತ್​ ಸಕ್ಸೇನಾ ಬೇಸರ

Sharat Saxena - Final
Published on

ಮುಂಬೈ: ಬಾಲಿವುಡ್​ನಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರೆಂದರೆ ಅದು ಹಿರಿಯ ನಟ ಶರತ್​ ಸಕ್ಸೇನಾ. 'ಮಿಸ್ಟರ್ ಇಂಡಿಯಾ', 'ಅಗ್ನೀಪಥ್​', 'ತ್ರಿದೇವ್​' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ 71 ವರ್ಷದ ಶರತ್​ ಸಕ್ಸೇನಾ, ಇದೀಗ ವಿದ್ಯಾ ಬಾಲನ್​ ಅಭಿನಯದ 'ಶೇರ್ನಿ' ಚಿತ್ರದಲ್ಲೊಂದು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಸತತವಾಗಿ ಒಂದರಹಿಂದೊಂದು ಚಿತ್ರಗಳಲ್ಲಿ ನಟಿಸಿರುವ ಶರತ್​, ಇತ್ತೀಚೆಗೆ ನಟಿಸುವುದು ಕಡಿಮೆಯಾಗಿದೆ. ಬಹಳ ಅಪರೂಪಕ್ಕೆಂಬಂತೆ ಅಲ್ಲೊಂದು, ಇಲ್ಲೊಂದು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಈ ಕುರಿತು ಅವರನ್ನು ಕೇಳಿದರೆ, ವಯಸ್ಸಾದ ಮೇಲೆ ಅವಕಾಶಗಳು ಸಿಗೋದು ಕಡಿಮೆ, ವಯಸ್ಸಾಗೋದೇ ದೊಡ್ಡ ಪಾಪ ಎಂದು ಬೇಸರಿಸಿಕೊಂಡಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನಟನಾಗೋದು, ಅದರಲ್ಲೂ ಹೀರೋ ಆಗೋದು ಜಗತ್ತಿನಲ್ಲಿ ಅತ್ಯಂತ ಕಷ್ಟದ ಕೆಲಸ. ಅವರು ವರ್ಷಪೂರ್ತಿ ಯಂಗ್​ ಆಗಿ ಕಾಣಿಸಬೇಕು. ಎಲ್ಲರಿಗೂ ಗೊತ್ತಿರುವಂತೆ, ಅದು ಬಹಳ ಕಷ್ಟ. ಬೇರೆ ವೃತ್ತಿಗಳಲ್ಲಿ ಒಂದು ಬ್ರೇಕ್​ ಆದರೂ ಸಿಗುತ್ತದೆ. ಇಲ್ಲಿ ಅದೂ ಇಲ್ಲ. ಒಬ್ಬ ನಟ ನಿರಂತರವಾಗಿ ಫಿಟ್​ ಆಗಿರುವುದಷ್ಟೇ ಅಲ್ಲ, ಯಂಗ್​ ಆಗಿ ಕಾಣಿಸಿಕೊಳ್ಳಬೇಕು. ಅದಕ್ಕಾಗಿ ಹಗಲು-ರಾತ್ರಿ ಕಷ್ಟಪಡಬೇಕು. ಒಟ್ಟಾರೆ, ಇಲ್ಲಿರುವುದಕ್ಕೆ ಹೋರಾಟ ಮಾಡುತ್ತಲೇ ಇರಬೇಕು' ಎಂದು ಹೇಳಿದ್ದಾರೆ.

ಇಲ್ಲಿ ವಯಸ್ಸಾಗೋದೇ ಮಹಾಪಾಪ ಎಂದಿರುವ ಅವರು, 'ನಾನು ಸಹ ಅದೇ ಹೋರಾಟ ಮಾಡುತ್ತಿದ್ದೇನೆ. ನನಗೀಗ 71. ಆದರೆ, 45 ವರ್ಷದವನ ತರಹ ಕಾಣಬೇಕು. ಸ್ವಲ್ಪ ವಯಸ್ಸಾಗಿ ಕಂಡರೆ, ತಕ್ಷಣ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಇದು ಯುವಕರ ಉದ್ಯಮ. ಇಲ್ಲಿ ಎಲ್ಲರೂ ಯುವಕರಾಗಿರಬೇಕು. ಒಂದು ಪಕ್ಷ ವಯಸ್ಸಾದರೂ ನೀವು ಯಂಗ್​ ಆಗಿ ಕಾಣಬೇಕು. ವಯಸ್ಸಾದವರ ತರಹ ಕಂಡರೆ, ದೊಡ್ಡ ಅಪರಾಧ ಎಂದು ಪರಿಗಣಿಸಲಾಗುತ್ತದೆ' ಎಂದು ಅವರು ಬೇಸರದಿಂದ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net