ಇಸ್ರೇಲ್‌ನಲ್ಲಿ 48 ಗಂಟೆಗಳ ತುರ್ತು ಪರಿಸ್ಥಿತಿ ಘೋಷಣೆ; ಪ್ರಧಾನಿ ಬೆಂಜಮಿನ್ ನೇತನ್ಯಾಹು ನೀಡಿದ ಕಾರಣ ಹೀಗಿದೆ

Untitled-design-2024-08-25T192620.812
Published on

ಜೆರುಸಲೇಮ್: ಲೆಬನಾನ್​ ದಾಳಿಯ ನಂತರ ಕಳೆದ ಕೆಲವು ದಿನಗಳಿಂದ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಯುದ್ಧದಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್​ ಪ್ರಧಾನಿ ಬೆಂಜಮಿನ್​​ ನೆತನ್ಯಾಹು ದೇಶದಲ್ಲಿ 48 ಗಂಟೆಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

ಕಳೆದ ತಿಂಗಳು ತನ್ನ ಕಮಾಂಡರ್ ಫುವಾಡ್ ಶುಕ್ರ್ ಹತ್ಯೆಗೆ ಸಂಬಂಧಿಸಿದಂತೆ ಆರಂಭಿಕ ಪ್ರತಿಕ್ರಿಯೆಯಾಗಿ ಇಸ್ರೇಲ್ ಕಡೆಗೆ ಬೃಹತ್ ರಾಕೆಟ್‌ಗಳು ಮತ್ತು ಡ್ರೋನ್‌ಗಳನ್ನು ಹಾರಿಸಿರುವುದಾಗಿ ಲೆಬನಾನ್ ಮೂಲದ ಹಿಜ್ಬುಲ್ಲಾ ಹೇಳಿದೆ. ಇದರಲ್ಲಿ ಯುದ್ಧ ವಿಮಾನಗಳು ಹಲವು ಇಸ್ರೇಲಿ ನೆಲೆಗಳು, ಬ್ಯಾರಕ್‌ಗಳು ಮತ್ತು ಹೆಚ್ಚಿನ ಸಂಖ್ಯೆಯ ರಾಕೆಟ್‌ಗಳೊಂದಿಗೆ ಐರನ್ ಡೋಮ್ ಪ್ಲಾಟ್‌ಫಾರ್ಮ್‌ಗಳನ್ನು ಗುರಿಯಾಗಿಸಿತು ಎಂದು ತಿಳಿಸಿದೆ.

ಬೈರುತ್‌ನಲ್ಲಿ ಇಸ್ರೇಲಿ ದಾಳಿಗೆ ಪ್ರತ್ಯುತ್ತರ ನೀಡುವುದಾಗಿ ಹಿಜ್ಬುಲ್ಲಾ ಮತ್ತು ಇರಾನ್ ಪ್ರತಿಜ್ಞೆ ಮಾಡಿದ್ದಾರೆ. ಹಿಜ್ಬುಲ್ಲಾ ಗುಂಪಿನ ಹಿರಿಯ ಕಮಾಂಡರ್ ಅನ್ನು ಇಸ್ರೇಲ್ ಹತ್ಯೆ ಮಾಡಿದ್ದಕ್ಕಾಗಿ ಹಿಜ್ಬುಲ್ಲಾ ಗುಂಪು ಇಸ್ರೇಲ್ ಅನ್ನು ದೂಷಿಸಿದೆ. ಸೇಡು ತೀರಿಸಿಕೊಳ್ಳಲು ಯುದ್ಧವನ್ನು ಯೋಜಿಸುತ್ತಿದೆ ಎನ್ನಲಾಗಿದೆ.

ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಗುರಿಗಳ ಮೇಲೆ ಮಿಲಿಟರಿ ವಾಯುದಾಳಿಗಳನ್ನು ಪ್ರಾರಂಭಿಸಿದ ನಂತರ ಉತ್ತರ ಇಸ್ರೇಲಿ ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ನಮ್ಮ ದೇಶವನ್ನು ರಕ್ಷಿಸಲು ನಾವು ಎಲ್ಲವನ್ನೂ ಮಾಡಲು ಸಿದ್ಧರಿದ್ದೇವೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net