ಐಸಿಸಿ ಶಂಕಿತ ಉಗ್ರ ಡಾಕ್ಟರ್ ರೆಹಮಾನ್ ತೀವ್ರ ವಿಚಾರಣೆ: ಮೂವರು ಸ್ನೇಹಿತರೂ ಎನ್​ಐಎ ವಶಕ್ಕೆ

ISIS
Published on

ಬೆಂಗಳೂರು: ಬಸವನಗುಡಿಯ ಅಪಾರ್ಟ್​ವೆುಂಟ್​ನಲ್ಲಿ ವಾಸಿಸುತ್ತಿದ್ದ ಐಸಿಸ್ ಶಂಕಿತ ಉಗ್ರ ಡಾ. ಅಬ್ದುರ್ ರೆಹಮಾನ್ (28)ನನ್ನು ರಾಷ್ಟ್ರೀಯ ತನಿಖಾ ತಂಡ (ಎನ್​ಐಎ) ತೀವ್ರ ವಿಚಾರಣೆಗೆ ಒಳಪಡಿಸಿದೆ.

ಈತನ ಜತೆಗೆ ಗುರುತಿಸಿಕೊಂಡಿದ್ದ ಮೂವರು ಸ್ನೇಹಿತರನ್ನು ವಶಕ್ಕೆ ಪಡೆದು ಎನ್​ಐಎ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಉಗ್ರ ಕೃತ್ಯದಲ್ಲಿ ವೈದ್ಯನ ಜತೆಗೆ ಮತ್ಯಾರಾದರೂ ಕೈ ಜೋಡಿಸಿದ್ದರೇ ಎಂಬುದರ ಬಗ್ಗೆ ಎನ್​ಐಎ ವಿಚಾರಣೆ ನಡೆಸುತ್ತಿದೆ. ಇದುವರೆಗೆ ಅಬ್ದುರ್ ಜತೆ ಅವರೂ ಸಿರಿಯಾಕ್ಕೆ ಹೋಗಿರುವುದು ಖಚಿತವಾಗಿಲ್ಲ. ಕೆಲವು ಸಾದಂರ್ಭಿಕ ಸಾಕ್ಷ್ಯಗಳು ಆಧರಿಸಿ ವೈದ್ಯನ ಸ್ನೇಹಿತರನ್ನು ಪ್ರಶ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಸಿಸ್ ಸಂಘಟನೆಗೆ ಅಬ್ದುರ್ ಕೆಲಸ ಮಾಡುತ್ತಿದ್ದ. ಆದರೆ, ಆ ಸಂಘಟನೆಗೆ ಸದಸ್ಯರ ನೇಮಕಾತಿ ಸೇರಿ ಬಹಿರಂಗವಾಗಿ ಚಟುವಟಿಕೆಗಳಲ್ಲಿ ಆತ ತೊಡಗಿರುವ ಬಗ್ಗೆ ಮಾಹಿತಿ ಇಲ್ಲ. ಗೌಪ್ಯವಾಗಿ ಆಪ್ ಅಭಿವೃದ್ಧಿ ಸೇರಿ ಇತರೆ ಸಂವಹನ ಕೆಲಸದಲ್ಲಿ ತೊಡಗಿದ್ದ. ಅಬ್ದುರ್ ತಂದೆಯೂ ವೈದ್ಯರಾಗಿದ್ದಾರೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಅಬ್ದುರ್, ಕುಟುಂಬದ ಜತೆ ವಾಸಿಸುತ್ತಿದ್ದ. ಪುತ್ರನ ಐಸಿಸ್ ನಂಟಿನ ಬಗ್ಗೆ ಮಾಹಿತಿ ಇಲ್ಲ ಎಂದು ಪಾಲಕರು ಹೇಳುತ್ತಿದ್ದಾರೆ. ಕುಟುಂಬ ಸದಸ್ಯರಿಗೆ ತಿಳಿಯದಂತೆ ಅಬ್ದುರ್ ಸಿರಿಯಾಗೆ ಹೋಗಿರುವ ಸಾಧ್ಯತೆಗಳಿವೆ ಎಂದು ಎನ್​ಐಎ ಮೂಲಗಳು ತಿಳಿಸಿವೆ.

ಜಾಗತಿಕ ಭಯೋತ್ಪಾದಕ ಸಂಘಟನೆ ‘ಐಸಿಸ್​ಗೆ ಆಪ್ ಅಭಿವೃದ್ಧಿ’ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಸಲುವಾಗಿ ಆರೋಪಿಯನ್ನು ಎನ್​ಐಎ ತಂಡ ಬುಧವಾರ ದೆಹಲಿಗೆ ಕರೆದೊಯ್ದಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿಸಿ ದೇಶ ವ್ಯಾಪಿ ವಿಧ್ವಂಸಕ ಕೃತ್ಯಕ್ಕೆ ಐಸಿಸ್ ಸಹೋದರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ ಸಂಚು ರೂಪಿಸಿತ್ತು. ಈ ಸಂಘಟನೆ ಜತೆ ಸಂಪರ್ಕ ಆರೋಪದಡಿ ಡಾ. ಅಬ್ದುರ್​ನನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net