ಬಾಂಗ್ಲಾ ಗಲಭೆಗೆ ಇದೇ ಕಾರಣ.. ಕೋರ್ಟ್ ತೀರ್ಪು ಏನು?

Bangla Protest
Published on

ಢಾಕಾ: ಬಾಂಗ್ಲಾದೇಶದಲ್ಲಿ ಪ್ರಸ್ತುತ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದೆ. ಯೋಧರಿಗೆ ಮೀಸಲಾತಿ ನೀಡುವ ಆ ಒಂದು ನಿರ್ಧಾರದಿಂದ ಪ್ರಧಾನಿ ಕುರ್ಚಿಯೇ ಅಲುಗಾಡಿತು. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ.. ದೇಶ ಬಿಟ್ಟು ಹೋಗುವಂತಾಯಿತು. ಆದರೆ ಈ ಪ್ರತಿಭಟನೆಗಳ ಹಿಂದೆ ನ್ಯಾಯಾಲಯದ ತೀರ್ಪು ಇದೆ ಎಂಬುದು ಗಮನಾರ್ಹ.

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ನಾಗರಿಕ ಸೇವಾ ಉದ್ಯೋಗಗಳಲ್ಲಿನ ಕೋಟಾವನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಯೊಂದಿಗೆ ಕಳೆದ ತಿಂಗಳು ಪ್ರತಿಭಟನೆಗಳು ಪ್ರಾರಂಭವಾಗಿದ್ದವು. ಕೊನೆಗೂ ಈ ಪ್ರತಿಭಟನೆಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದು, ಈಗಿನ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದವು.

1971ರಲ್ಲಿ ಮಡಿದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರು ಶೇಖ್ ಹಸೀನಾ ಸರ್ಕಾರ ಮೀಸಲಾತಿ ರದ್ದುಗೊಳಿಸಿದ ನಿರ್ಧಾರದ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆ ಅರ್ಜಿಗಳನ್ನು ಪರಿಗಣಿಸಿದ ಹೈಕೋರ್ಟ್, ಈ ವರ್ಷದ ಜೂನ್‌ನಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ತಿರಸ್ಕರಿಸಿ ಮೀಸಲಾತಿ ಕೋಟಾ ವ್ಯವಸ್ಥೆ ಮತ್ತೆ ಜಾರಿಗೆ ಬಂದಿತ್ತು.

ನ್ಯಾಯಾಲಯದ ಹೊಸ ಆದೇಶದೊಂದಿಗೆ, ಸರ್ಕಾರಿ ಉದ್ಯೋಗಗಳಲ್ಲಿ 56 ಪ್ರತಿಶತ ಕೋಟಾವನ್ನು ವಿಶೇಷ ಗುಂಪುಗಳಿಗೆ ಮೀಸಲಿಡಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಕ್ಕಳು, ಮತ್ತು ಮಹಿಳೆಯರಿಗೆ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಇದರೊಂದಿಗೆ ನಿರುದ್ಯೋಗಿ ಯುವಕರು ಆತಂಕಕ್ಕೆ ಒಳಗಾಗಿದ್ದರು.

ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಮೂರನೇ ತಲೆಮಾರಿನವರಿಗೆ ಏಕೆ ಮೀಸಲಾತಿ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ ನಡೆಸಿದ ಹೋರಾಟ 300 ಜನರನ್ನು ಬಲಿಪಡೆಯುವಂತಾಯಿತು. ಕಡೆಗೆ ಸುಪ್ರೀಂ ಕೋರ್ಟ್ ವಿವಾದಾತ್ಮಕ ಕೋಟಾ ವ್ಯವಸ್ಥೆಯನ್ನು ರದ್ದುಗೊಳಿಸಿತು. 93 ರಷ್ಟು ಸರ್ಕಾರಿ ಉದ್ಯೋಗಗಳನ್ನು ಅರ್ಹತೆಯ ಆಧಾರದ ಮೇಲೆ ನೇಮಿಸಬೇಕು ಮತ್ತು ಉಳಿದ ಶೇಕಡಾ 7 ರಷ್ಟು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ನೀಡಬೇಕು ಎಂದು ತನ್ನ ಆದೇಶದಲ್ಲಿ ಹೇಳಿದೆ.

ಆದರೆ ಶೇಖ್ ಹಸೀನಾ ಅವರು ಪ್ರತಿನಿಧಿಸುವ ಅವಾಮಿ ಲೀಗ್ ಪಕ್ಷಕ್ಕೆ ಸಂಬಂಧಿಸಿದ ಜನರು ಮಾತ್ರ ಈ ಮೀಸಲಾತಿಯಿಂದ ಲಾಭ ಪಡೆಯುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಮುಖ್ಯವಾಗಿ ಆರೋಪಿಸಿದರು. ಈ ಕ್ರಮದಲ್ಲಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿ ರಸ್ತೆಗಿಳಿದಿದ್ದರು.

ಮತ್ತೊಂದೆಡೆ, ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನಿಂದ ಪ್ರತಿಭಟನಾಕಾರರು ತೃಪ್ತರಾಗಲಿಲ್ಲ. ಇನ್ನು ಬಾಂಗ್ಲಾದೇಶದಲ್ಲಿ ಇತ್ತೀಚಿನ ಹಿಂಸಾಚಾರದ ಹಿಂದೆ ಪಾಕಿಸ್ತಾನ ಸೇನೆ, ಗುಪ್ತಚರ ಸಂಸ್ಥೆ ಮತ್ತು ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ - ಐಎಸ್​ಐ ಕೈವಾಡವಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಬಾಂಗ್ಲಾದೇಶದ ಛತ್ರ ಶಿವಿರ್ ಎಂಬ ವಿದ್ಯಾರ್ಥಿ ಸಂಘಟನೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದೆ. ಆದರೆ, ಛತ್ರ ಶಿವಿರ್ ಎಂಬ ಸಂಘಟನೆಯು ಬಾಂಗ್ಲಾದೇಶದಲ್ಲಿ ನಿಷೇಧಿತ ಜಮಾತ್-ಎ-ಇಸ್ಲಾಮಿಯ ಶಾಖೆಯಾಗಿದೆ ಎಂಬುದು ಗಮನಾರ್ಹ ಸಂಗತಿ.ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಐಎಸ್‌ಐ ಕೂಡ ಹಸ್ತಕ್ಷೇಪ ಮಾಡಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net