

ವಯನಾಡು: ಅಸಹಾಯಕರು, ಸಂಕಷ್ಠದಲ್ಲಿರುವವರನ್ನು ತಮ್ಮ ಜೀವ ಪಣಕ್ಕಿಟ್ಟು ರಕ್ಷಿಸುವ ಹೀರೋಗಳನ್ನು ನಾವು ಚಲನಚಿತ್ರಗಳಲ್ಲಿ ಕಾಣಬಹುದು. ಅವರೆಲ್ಲ ರೀಲ್ ಹೀರೋಗಳಾದರೆ..ಕೆಲವರು ಆಪತ್ಕಾಲದಲ್ಲಿ ಸಹಾಯ ಮಾಡುವ ಮೂಲಕ ನಿಜವಾದ ಸೂಪರ್ ಹೀರೋಗಳಂತೆ ಕಾಣುತ್ತಾರೆ. ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 300 ಕ್ಕೂ ಹೆಚ್ಚು ಜನ ಮೃತಪಟ್ಟು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ದುರಂತ ಸಂಭವಿಸಿದಾಗ ಬೆಟ್ಟಗಳಲ್ಲಿ ಸಿಲುಕಿರುವ ಸಂತ್ರಸ್ತರನ್ನು ರಕ್ಷಿಸಲು ಎನ್ಡಿಆರ್ಎಫ್ ತಂಡಗಳ ಜತೆಗೆ ಸ್ಥಳೀಯ ಕೆಲವು ಯುವಕರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಅವರಲ್ಲಿ ಹತ್ತಿಪ್ಪತ್ತು ಜನರ ಜೀವ ಉಳಿಸಲು ಶ್ರಮಿಸಿದ ಪ್ರಜೀಶ್ ಎಂಬ ರಿಯಲ್ ಹೀರೋ ಆಗಿ ಕಂಡಿದ್ದ ಯುವಕ ಈಗ ನಾಪತ್ತೆಯಾಗಿದ್ದಾರೆ.
ಪ್ರಜೀಶ್ ಎರಡು ಬಾರಿ ಸಂತ್ರಸ್ತರನ್ನು ತಮ್ಮ ಜೀಪ್ನಲ್ಲಿ ಕರೆದುಕೊಂಡು ಪುನರ್ವಸತಿ ಕೇಂದ್ರಗಳಿಗೆ ಕರೆದೊಯ್ದಿದ್ದರು. ಆದರೆ ಮೂರನೇ ಬಾರಿಗೆ ಸಹಾಯ ಮಾಡಲು ಹೋದ ಅವರು ಇನ್ನೂ ಪತ್ತೆಯಾಗಿಲ್ಲ.
ಸಹಾಯ ಮಾಡುವ ಮನಸ್ಥಿತಿಯ ಪ್ರಜೀಶ್, ಜುಲೈ 30 ರಂದು ಮುಂಜಾನೆ ತನ್ನ ಸ್ನೇಹಿತರೊಂದಿಗೆ ಮುಂಡಕ್ಕೈ ಮತ್ತು ಚುರಲ್ಮಲಾ ಪ್ರದೇಶಗಳಲ್ಲಿ ಭೂಕುಸಿತದ ಸ್ಥಳಕ್ಕೆ ಧಾವಿಸಿದ್ದರು. ಎನ್ಡಿಆರ್ಎಫ್ ಸಿಬ್ಬಂದಿ ತಲುಪುವ ಮುನ್ನವೇ ಅವರು ಕ್ಷೇತ್ರ ಪ್ರವೇಶಿಸಿದ್ದಾರೆ. ಸಂತ್ರಸ್ತರನ್ನು ರಕ್ಷಿಸಲು ಅವರು ಜೀಪಿನಲ್ಲಿ ಅಪಾಯಕಾರಿ ಗುಡ್ಡಗಾಡು ಮಾರ್ಗದಲ್ಲಿ ತೆರಳಿದ್ದರು. ಅವರು ಹತ್ತಾರು ಜನರನ್ನು ಎರಡು ಬಾರಿ ಉಳಿಸಿದ್ದಾರೆ. ಎಲ್ಲವೂ ಮುಗಿಯಿತು ಎಂದುಕೊಂಡಾಗ ಪಕ್ಕದ ಇನ್ನೊಂದು ಗುಡ್ಡದಲ್ಲಿ ಬೇರೊಬ್ಬರು ಸಿಲುಕಿರುವ ಮಾಹಿತಿ ಸಿಕ್ಕಿದೆ. ಪ್ರಜೀಶ್ ರಿಸ್ಕ್ ತೆಗೆದುಕೊಂಡು ಕೂಡಲೇ ತನ್ನ ಜೀಪಿನಲ್ಲಿ ಬೆಟ್ಟಕ್ಕೆ ಹೋಗಿದ್ದಾರೆ. ಆದರೆ ವಾಪಸ್ ಬರಲಿಲ್ಲ ಎಂದು ಸ್ನೇಹಿತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದರ ನಡುವೆ, ಪ್ರಜೀಶ್ ಅವರ ಜೀಪ್ ತುಕ್ಕು ಹಿಡಿದಿದ್ದು, ಚುರಲ್ಮಳದ ಮರದ ಪಕ್ಕದಲ್ಲಿ ಪತ್ತೆಯಾಗಿದೆ. ಆದರೆ ಜೀಪಿನಲ್ಲಿದ್ದ ಪ್ರಜೀಶ್ನ ಗುರುತು ಪತ್ತೆಯಾಗದ ಕಾರಣ ಆತನ ಕುಟುಂಬಸ್ಥರು, ಸ್ನೇಹಿತರು ಹಾಗೂ ಸ್ಥಳೀಯರು ಕಣ್ಣೀರಾಕುತ್ತಿದ್ದಾರೆ.