

ಬೆಂಗಳೂರು: ಗೀತರಚನೆಕಾರ ಗೌಸ್ ಪೀರ್ ಈಗಾಗಲೇ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ದಿಗಂತ್ ಅಭಿನಯದ 'ಶಾರ್ಪ್ ಶೂಟರ್' ಎಂಬ ಚಿತ್ರಕ್ಕೆ ಈಗಾಗಲೇ ಅವರು ಆಕ್ಷನ್-ಕಟ್ ಹೇಳಿದ್ದಾರೆ. ಈಗ ಅವರು ತಮ್ಮ ವಿ ಕ್ಯಾನ್ ಎಂಟರ್ಟೈನರ್ ಬ್ಯಾನರ್ ನಲ್ಲಿ ಹೊಸ ಥ್ರಿಲ್ಲರ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರನ ಮಗನ ಭೂಗತ ಲೋಕದ ಪಯಣ …
ಈ ಚಿತ್ರದ ಮೂಲಕ ಪೀರ್, ಇಶಾನಾ ಎಂಬ ಉತ್ತರ ಕನ್ನಡದ ಹುಡುಗಿಯನ್ನು ನಾಯಕಿಯನ್ನಾಗಿ ಪರಿಚಯಿಸುತ್ತಿದ್ದಾರೆ. ಇಶಾನಾಗೆ ಇದು ಮೊದಲ ಕನ್ನಡ ಚಿತ್ರವಾದರೂ, ಈಗಾಗಲೇ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನ 'ರೇಟ್ಲ' ಎಂಬ ಸಿನಿಮಾದ ಇಬ್ಬರು ನಾಯಕಿಯರ ಪೈಕಿ ಇಶಾನ ಕೂಡ ಒಬ್ಬರು. ವಿಶೇಷವೆಂದರೆ, ಈ ಸಿನಿಮಾಗೆ ಪ್ರಭುದೇವ ಹೀರೋ. ಉಳಿದಂತೆ ತೆಲುಗಿನ ' ಕರ್ಮ' ಎಂಬ ಸಿನಿಮಾದಲ್ಲೂ ಇಶಾನ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಕಾರ್ತಿಕ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ, ಇಶಾನಾ ಕನ್ನಡ ಚಿತ್ರವೊಂದರಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಮೂಲತಃ ಉತ್ತರ ಕರ್ನಾಟಕದವರಾದರೂ, ಸದ್ಯ ಬೆಂಗಳೂರಲ್ಲೇ ನೆಲೆಸಿರುವ ಇಶಾನ, ಬಿ ಕಾಂ, ಎಂಬಿಎ ಮುಗಿಸಿದ್ದಾರೆ. ಕಾಲೇಜ್ ದಿನಗಳಲ್ಲೇ ಸಿನಿಮಾ ಅವಕಾಶ ಬಂದರೂ, ಶಿಕ್ಷಣ ಮುಗಿಸುವ ಹಂಬಲ ಇಶಾನ ಅವರಿಗಿತ್ತು. ಕಾಲೇಜು ಮುಗಿದ ಕೂಡಲೇ ಇಶಾನಗೆ ಸಿನಿ ಜಗತ್ತು ಕೈ ಬೀಸಿ ಕರೆದಿದ್ದೇ ತಡ, ನಾಯಕಿ ಆಗುವ ಮೊದಲು ನಟನೆ ಅರ್ಹತೆ ಪಡೆದುಕೊಳ್ಳಬೇಕೆಂದು ಚಾಮರಾಜ್ ಮಾಸ್ಟರ್ ಬಳಿ ನಟನೆ ತರಬೇತಿ ಪಡೆದುಕೊಂಡಿದ್ದಾರೆ. ಒಂದು ಚಿತ್ರ ಬಿಡುಗಡೆಯಾಗುವ ಮೊದಲೇ ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಾಯಕಿಯಾಗುವ ಅವಕಾಶ ಪಡೆದಿದ್ದಾರೆ.
ಗೌಸ್ ಪೀರ್ ನಿರ್ದೇಶನದ ಹೆಸರಿಡದ ಹೊಸ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ.