

Trisha : ಬಹುಭಾಷ ನಟಿ ತ್ರಿಷಾ ಅವರವನ್ನು ಪರಿಚಯಿಸುವ ಅಗತ್ಯವಿಲ್ಲ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್, ಸೂರ್ಯ, ವಿಕ್ರಮ್, ಪ್ರಭಾಸ್, ಚಿರಂಜೀವಿ, ಅಜಿತ್, ಸಿಂಬು ಸೇರಿದಂತೆ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿವಂಗತ ನಟ ಪುನೀತ್ ರಾಜ್ಕುಮಾರ್ ಅಭಿನಯದ ಪವರ್ಸ್ಟಾರ್ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ತ್ರಿಷಾ ಭಾರತದ ಚಿತ್ರರಂಗದ ಸಾರ್ವಕಾಲಿಕ ರಾಣಿ. ಹೆಚ್ಚು ಗಾಸಿಪ್ಗಳಲ್ಲಿ ಕಾಣಿಸಿಕೊಳ್ಳದ ನಟಿ. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿರುವ ತ್ರಿಷಾ, 40 ವರ್ಷ ವಯಸ್ಸಾದರೂ ಇನ್ನೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ಈ ಹಿಂದೆ ನಟ ಸಿಂಬು ಮತ್ತು ರಾಣ ದಗ್ಗುಬಾಟಿ ಅವರ ಜೊತೆ ತ್ರಿಷಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಇದು ವದಂತಿಯಾಗಿಯೇ ಉಳಿಯಿತು. ಇದರ ನಡುವೆ ತ್ರಿಷಾ ಅವರು 2015ರಲ್ಲಿ ಉದ್ಯಮಿ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಇದು ಬಹಳ ಸುದ್ದಿಯಾಗಿತ್ತು. ಅಲ್ಲದೆ, ನಿಶ್ಚಿತಾರ್ಥದ ಫೋಟೋಗಳು ಸಹ ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ಆದರೆ, ಇಬ್ಬರ ನಡುವೆ ಏನಾಯಿತೋ ಗೊತ್ತಿಲ್ಲ, ಏಕಾಏಕಿ ಇಬ್ಬರೂ ಬೇರ್ಪಟ್ಟರು! ಮದುವೆಯೂ ನಿಂತುಹೋಯಿತು.
ಅನೇಕ ದಿನಗಳಿಂದ ತ್ರಿಷಾ ಮದುವೆ ಕುರಿತು ಒಂದಲ್ಲ ಒಂದು ಸುದ್ದಿ ಹರಿದಾಡುತ್ತಲೇ ಇದೆ. ತ್ರಿಷಾ ಮದುವೆ ಆಗ್ತಾರಾ ಅನ್ನೋ ಪ್ರಶ್ನೆ ಸಹ ಕಾಡುತ್ತಿದೆ. ಇದರ ನಡುವೆ ಕೆಲ ದಿನಗಳ ಹಿಂದೆ ತ್ರಿಷಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದರು. ಪ್ರೀತಿ ಯಾವಾಗಲೂ ಗೆಲ್ಲುತ್ತದೆ ಎಂಬ ಟೈಟಲ್ನೊಂದಿಗೆ ತ್ರಿಷಾ ಹಂಚಿಕೊಂಡಿರುವ ಫೋಟೋ ಎಲ್ಲರ ಗಮನ ಸೆಳೆದಿತ್ತು. ಫೋಟೋದಲ್ಲಿ ಹಸಿರು ರೇಷ್ಮೆ ಸೀರೆ ಮತ್ತು ಸಾಂಪ್ರದಾಯಿಕ ಆಭರಣಗಳಲ್ಲಿ ತ್ರಿಶಾ ವಧುವಿನಂತೆ ಸುಂದರವಾಗಿ ಕಾಣುತ್ತಿದ್ದರು. ಫೋಟೋದಲ್ಲಿ ತ್ರಿಷಾ ಮಲ್ಲಿಗೆ ಹೂವು ಮುಡಿದಿದ್ದಾರೆ. ಆ ಹೂವನ್ನು ಯಾರೋ ಮುಡಿಸುತ್ತಿದ್ದಾರೆ. ಹೀಗಾಗಿ ಮದುವೆ ಚರ್ಚೆ ಗರಿಗೆದರಿತ್ತು. ಹೂವು ಮುಡಿಸುತ್ತಿರುವುದು ಭಾವಿ ಪತಿಯೇ ಎಂದು ಮಾತನಾಡಿಕೊಳ್ಳುತ್ತಿದ್ದರು. ಈ ಚರ್ಚೆ ಇನ್ನು ಜೀವಂತವಾಗಿರುವಾಗಲೇ ಮತ್ತೊಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ತ್ರಿಷಾ ರೇಷ್ಮೆ ಸೀರೆ ಧರಿಸಿ ವಧುವಿನಂತೆ ಕಂಗೊಳಿಸುತ್ತಿದ್ದಾರೆ. ಅಲ್ಲದೆ, ಕತ್ತಿನಲ್ಲಿ ಮಾಂಗಲ್ಯ ಸರವೂ ಕೂಡ ಇದೆ. ಮದುವೆ ಮಂಟಪದ ಮೇಲೆ ನಿಂತು ಕೆಲವರೊಂದಿಗೆ ಪೋಸ್ ಕೂಡ ನೀಡಿದ್ದಾರೆ. ಹೀಗಾಗಿ, ತ್ರಿಷಾ ಮದುವೆಯಾಗಿಬಿಟ್ರಾ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ, ಕೆಲ ಅಭಿಮಾನಿಗಳು ಅಭಿನಂದನೆಗಳನ್ನು ಸಹ ಸಲ್ಲಿಸುತ್ತಿದ್ದಾರೆ. ಆದರೆ, ಕೆಲ ಅಭಿಮಾನಿಗಳು ತ್ರಿಷಾ ಮದುವೆಯಾಗಿಲ್ಲ ಎನ್ನುತ್ತಿದ್ದಾರೆ. ವೈರಲ್ ಆಗುತ್ತಿರುವ ಯಾವುದೋ ಜಾಹಿರಾತು ಶೂಟಿಂಗ್ ಇರಬಹುದು ಎನ್ನುತ್ತಿದ್ದಾರೆ.
ಸದ್ಯ ತ್ರಿಷಾ ಮದುವೆ ವಿಚಾರದಲ್ಲಿ ಗೊಂದಲ ಹಾಗೇ ಮುಂದುವರಿದಿದೆ. ಈ ವಿಚಾರದಲ್ಲಿ ತ್ರಿಷಾ ಮಾತ್ರ ಸ್ಪಷ್ಟತೆ ನೀಡಬೇಕಿದೆ. ಹೀಗಾಗಿ ನೆಟ್ಟಿಗರು ಕಾಮೆಂಟ್ಗಳ ಮೂಲಕ ತ್ರಿಷಾರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ತ್ರಿಷಾ ಏನು ಹೇಳುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಅಂದಹಾಗೆ ತ್ರಿಷಾ ತಮ್ಮ ವೈಯಕ್ತಿಕ ಜೀವನದ ವಿವರಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಇಜ್ಜಿ ಎಂಬ ನಾಯಿಮರಿಯನ್ನು ದತ್ತು ಪಡೆದ ಸುದ್ದಿಯನ್ನು ತ್ರಿಷಾ ಹಂಚಿಕೊಂಡರು. ಅವರು ಇನ್ಸ್ಟಾಗ್ರಾಂನಲ್ಲಿ ನಾಯಿಮರಿಯ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಸಾಕು ನಾಯಿ ‘ಝೋರೋ’ ನಿಧನವಾದ ಸುದ್ದಿಯನ್ನು ಈ ಹಿಂದೆ ಹೇಳಿಕೊಂಡು ಬೇಸರ ಹೊರಹಾಕಿದ್ದರು. (ಏಜೆನ್ಸೀಸ್)