

Home Remedies: ಸೂರ್ಯನ ಕಿರಣಗಳಿಗೆ ನಿಮ್ಮ ಚರ್ಮವು ಒಡ್ಡಿಕೊಂಡ ನಂತರ, ಸನ್ಬರ್ನ್ ಆಗುವುದು ಸಾಮಾನ್ಯವಾಗಿದೆ. ಇದು ನಿಮ್ಮ ಚರ್ಮವನ್ನು ಕೆಂಪಾಗಿಸುವುದು, ನೋವು, ಕೆಲವೊಮ್ಮೆ ಚರ್ಮದ ಸಿಪ್ಪೆ ಕಿತ್ತು ಬರುವಂತಹ ಅನುಭವವಾಗಲು ಪ್ರಾರಂಭಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಹಲವಾರು ಜನರು ನಿರಾಸೆ ವ್ಯಕ್ತಪಡಿಸಿ, ಆಸ್ಪತ್ರೆಗೆ ಹೋಗುತ್ತಾರೆ. ಇಲ್ಲವೇ, ಬೇರೆ ಕ್ರೀಮ್ಗಳನ್ನು ಹಚ್ಚಲು ಆರಂಭಿಸುತ್ತಾರೆ. ಇವೆಲ್ಲವನ್ನೂ ಬಿಟ್ಟು, ನಿಮ್ಮ ಚರ್ಮವನ್ನು ಶಾಂತಗೊಳಿಸಲು ನಿಮ್ಮ ಮನೆಗಳಲ್ಲಿಯೇ ಈ ರೀತಿಯ ಮನೆಮದ್ದು ಬಳಸಿ. ಇವು ನಿಮ್ಮ ತ್ವಚೆಯನ್ನು ಕಾಪಾಡಲು ಸಹಾಯ ಮಾಡುತ್ತದೆ.
ತೆಂಗಿನಕಾಯಿ ಎಣ್ಣೆಯು ಚರ್ಮವನ್ನು ತಂಪುಗೊಳಿಸುತ್ತದೆ ಮತ್ತು ಉರಿಯನ್ನು ಕಡಿಮೆ ಮಡುವಂತಹ ಗುಣವನ್ನು ಹೊಂದಿದೆ. ಆದರಿಂದ ಸನ್ಬರ್ನ್ ಆದ ಜಾಗಕ್ಕೆ ತಂಪಾದ ತೆಂಗಿನಕಾಯಿ ಎಣ್ಣೆಯನ್ನು ಹಚ್ಚಿ 15-20 ನಿಮಿಷ ಬಿಟ್ಟು ಶುದ್ಧ ತಣ್ಣೀರಿನಲ್ಲಿ ತೊಳೆಯಿರಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿ. ಇದು ನಿಮ್ಮ ಚರ್ಮವನ್ನು ತೇವಾಂಶಗೊಳಿಸಿ, ಸುಟ್ಟ ಚರ್ಮವನ್ನು 1 ವಾರದಲ್ಲಿಯೇ ಸರಿ ಮಾಡುತ್ತದೆ.
ಮೊಸರು ಚರ್ಮಕ್ಕೆ ತಂಪು ನೀಡುವ ನೈಸರ್ಗಿಕ ಉತ್ಪನ್ನವಾಗಿದೆ. ತಂಪಾದ ಮೊಸರನ್ನು ಸನ್ಬರ್ನ್ ಆದ ಭಾಗಕ್ಕೆ ದಪ್ಪವಾಗಿ ಹಚ್ಚಿ, 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ಮುಖದಲ್ಲಾಗುವ ಉರಿಯನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಅರಿಶಿಣವನ್ನು ಸಹ ಮಿಕ್ಸ್ ಮಾಡಿ ಹಚ್ಚಬಹುದು.
ಅಲೊವೆರಾ ಸನ್ ಬರ್ನ್ಗೆ ಅತ್ಯುತ್ತಮ ಔಷಧವಾಗಿದೆ. ಶುದ್ಧವಾದ ಅಲೊವೆರಾವನ್ನು ಕತ್ತರಿಸಿ ಅದರಲ್ಲಿರುವ ಜೆಲ್ನ್ನು ಸನ್ಬರ್ನ್ ಆದ ಜಾಗಕ್ಕೆ ಹಚ್ಚಿರಿ 15 ನಿಮಿಷಗಳ ನಂತರ ತೊಳೆಯಿರಿ. ಇದು ನಿಮ್ಮ ಚರ್ಮದಲ್ಲಾಗುವ ಉರಿಯನ್ನು ಕಡಿಮೆ ಮಾಡಿ ತಂಪಾಗಿಸುತ್ತದೆ. ಇದರ ಜೊತೆಯಲ್ಲಿ ಬೇಗನೆ ಗುಣಮುಖವಾಗುವಂತೆ ಮಾಡುತ್ತದೆ.
ಇಂದಿನ ದಿನಗಳಲ್ಲಿ ಅಧಿಕವಾಗಿ ರೋಸ್ ವಾಟರ್ ಬಳಕೆಯಾಗುತ್ತಿದೆ. ಇದು ಚರ್ಮಕ್ಕೆ ಲೇಪಿಸುವುದರಿಂದ ತಂಪಾಗಿರುತ್ತದೆ. ಪ್ರತಿನಿತ್ಯ ರೋಸ್ ವಾಟರ್ನ್ನು ನಿಮ್ಮ ಚರ್ಮಕ್ಕೆ ಲೇಪನ ಮಾಡುವುದರಿಂದ ಚರ್ಮದಲ್ಲಾಗುವ ಕೆಂಪು, ಉರಿ ಕಡಿಮೆಯಾಗಿ ಸನ್ಬರ್ನ್ ಕಡಿಮೆ ಮಾಡುತ್ತದೆ.
ಕೊಬ್ಬರಿ ನೀರು ನಿಮ್ಮ ಚರ್ಮವನ್ನು ತಂಪಾಗಿಸಲು ಪ್ರಯತ್ನ ಮಾಡುತ್ತದೆ. ಹಾಗಾಗಿ ಕೊಬ್ಬರಿ ನೀರನ್ನು ನೀರಿನೊಂದಿಗೆ ಬೆರೆಸಿ ಸ್ನಾನ ಮಾಡಿ ಇದು ಸನ್ಬರ್ನ್ ಆದಂತಹ ಪ್ರದೇಶವನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. ಕೊಬ್ಬರಿ ನೀರಿನಲ್ಲಿರುವ ಖನಿಜಗಳು ಚರ್ಮವನ್ನು ಪೋಷಿಸುತ್ತವೆ ಮತ್ತು ಒಣಗಿದ ಚರ್ಮವನ್ನು ತೇವಗೊಳಿಸುತ್ತವೆ. ಆದರಿಂದ ಪ್ರತಿನಿತ್ಯ ಕೊಬ್ಬರಿ ನೀರಿನೊಂದಿಗೆ ಸ್ನಾನ ಮಾಡಿ. ಇದು ಚರ್ಮದ ಸಿಪ್ಪೆಯಾಗುವಿಕೆಯನ್ನು ತಡೆಗಟ್ಟುತ್ತದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ