ಈ ಬಾರಿ ರಾಜ್ಯದಲ್ಲಿ ಕೊರೆಯುವ ಚಳಿ?

Severe Cold
Published on

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ವಾಡಿಕೆ ಅಥವಾ ವಾಡಿಕೆಗಿಂತ ತುಸು ಅಧಿಕವಾಗಿ ಕೊರೆಯುವ ಚಳಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಳಿಗಾಲ ಆರಂಭವಾಗುತ್ತದೆ. 2026ರ ಜನವರಿ ಅಂತ್ಯದವರೆಗೆ ಇದು ಮುಂದುವರಿಯುತ್ತದೆ. ಆದರೆ, ಈ ಬಾರಿ ವಾಡಿಕೆಗಿಂತ ಮುನ್ನ ಅಂದರೆ ಮುಂದಿನ ತಿಂಗಳು ಮೊದಲ ವಾರ ಅಥವಾ 2ನೇ ವಾರದಲ್ಲಿ ಚಳಿ ಶುರುವಾಗಲಿದ್ದು,ಹಂತ ಹಂತವಾಗಿ ಚಳಿಯ ಪ್ರಮಾಣ ಜಾಸ್ತಿಯಾಗಲಿದೆ.

ಬೆಂಗಳೂರು ನಗರ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಮುಂಜಾನೆ ಮಂಜು ಬೀಳುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇದು ಜಾಸ್ತಿಯಾಗಿದೆ. ಈ ಬಾರಿ ಮುಂಗಾರು ಅವಧಿಯಲ್ಲಿ ಉತ್ತಮವಾಗಿ ಮಳೆ ಸುರಿದಿರುವುದು, ಹಿಂಗಾರು ಅವಧಿಯಲ್ಲಿ ವಾಡಿಕೆಗಿಂತ ಅಧಿಕ ವರ್ಷಧಾರೆಯಾಗುವುದು, ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಹೆಚ್ಚು ಸೈಕ್ಲೋನ್ ರೂಪುಗೊಳ್ಳುವುದರಿಂದ ಭೂಮಿ ಮೇಲೆ ತೇವಾಂಶ ಜಾಸ್ತಿಯಾಗಿ ಚಳಿ ಹೆಚ್ಚಾಗಲಿದೆ.

ಉತ್ತರದಿಂದ ದಕ್ಷಿಣ ಕಡೆಗೆ ಗಾಳಿ ಬೀಸಿದರೆ, ಬಂಗಾಳದ ಉಪಸಾಗರದಿಂದ ಅಥವಾ ದಕ್ಷಿಣದ ಹಿಂದೂ ಮಹಾಸಾಗರದಿಂದ ಗಾಳಿ ಬೀಸಿದರೂ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಏರಿಳಿತವಾಗಿ ಚಳಿ ಹೆಚ್ಚಾಗುತ್ತಿದೆ ಎಂದು ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸ ರೆಡ್ಡಿ ಹೇಳುತ್ತಾರೆ.

ವಿಜಯಪುರ, ಬೀದರ್, ಕಲಬುರಗಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಹಾವೇರಿ, ದಾವಣಗೆರೆ, ಮೈಸೂರು, ಮಂಡ್ಯ, ಹಾಸನ ಮತ್ತು ಶಿವಮೊಗ್ಗ ಸೇರಿ ಇತರ ಜಿಲ್ಲೆಗಳಲ್ಲಿ ಚಳಿ ತೀವ್ರತೆ ಜಾಸ್ತಿ ಇರಲಿದೆ. ಅಲ್ಲದೆ, ಬೆಂಗಳೂರುಗಿಂತ ಮಧ್ಯ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿಯೂ ಜಾಸ್ತಿ ಚಳಿ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net