

ಬೆಂಗಳೂರು: ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ತರುವಲ್ಲಿ ಪ್ರಮುಖ ಪಾತ್ರವಹಿಸುವ ಅಬಕಾರಿ ಪೇದೆ ಮತ್ತು ಹಿರಿಯ ಪೇದೆಯವರನ್ನು ಅಬಕಾರಿ ಇಲಾಖೆಯಲ್ಲಿ ಕಡೆಗಣಿಸಲಾಗುತ್ತಿದೆ.
2019ರಲ್ಲಿ ನೇಮಕಾತಿ ಹೊಂದಿರುವ ಅಬಕಾರಿ ಪೇದೆಗಳಿಗೆ ಈವರೆಗೆ ಸಮವಸ್ತ್ರ ಕಿಟ್, ಶೂ, ಸಾಕ್ಸ್, ಕ್ಯಾಪ್, ಸ್ವೆಟರ್, ಬೆಲ್ಟ್, ರೇಡಿಯಂ ಜಾಕೆಟ್, ಹೆಲ್ಮೆಟ್, ಶೋಲ್ಡರ್ ಬ್ಯಾಡ್ಜ್‌ಗಳನ್ನೇ ನೀಡಿಲ್ಲ. ಈ ಬಗ್ಗೆ ಇಲಾಖೆಗೆ ಅಬಕಾರಿ ಪೇದೆಗಳು ಪತ್ರ ಬರೆದಿದ್ದಾರೆ. ರಾಮನಗರ, ಶಿವಮೊಗ್ಗ ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಪೇದೆಗಳಿಗೆ ಸಮವಸ್ತ್ರ ಕಿಟ್ ವಿತರಿಸಿಲ್ಲ. ಈ ವರ್ಷವಾದರೂ ನೀಡುವಂತೆ ಇಲಾಖೆ ಬರೆದಿರುವ ಪತ್ರದಲ್ಲಿ ಅಬಕಾರಿ ಪೇದೆಗಳು ಮನವಿ ಮಾಡಿಕೊಂಡಿದ್ದಾರೆ.
ಅಬಕಾರಿ ಪೇದೆ ಮತ್ತು ಹಿರಿಯ ಪೇದೆ ಸಿಬ್ಬಂದಿಗೆ ವೇತನ ಹೆಚ್ಚಿಸುವಂತೆ ಒತ್ತಾಯ ಕೇಳಿಬಂದಿದೆ. ಪೋಲಿಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್, ಮುಖ್ಯ ಪೇದೆಗಳು, ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರು,ಉಪ ವಲಯ ಅರಣ್ಯಾಧಿಕಾರಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಅಗ್ನಿ ಶಾಮಕರು, ಮುಖ್ಯ ಅಗ್ನಿ ಶಾಮಕರು,ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಗಳು, ವಿಭಾಗೀಯ ಅಗ್ನಿಶಾಮಕ ಅಧಿಕಾರಿಗಳು, ಕಾರಾಗೃಹ ಇಲಾಖೆಯಲ್ಲಿ ವಾಡರ್ಸ್, ಮುಖ್ಯ ವಾಡರ್ಸ್, ಜೈಲರ್‌ಗಳು, ಕಾರಾಗೃಹ ಸಹಾಯಕ ಅಧೀಕ್ಷಕರು ಸಮವಸ್ತ್ರ ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಯಾ ಇಲಾಖೆಗಳು ಮೇಲಿನ ಸಿಬ್ಬಂದಿ ವೇತನ ಹೆಚ್ಚಿಸಲಾಗಿದೆ. ಆದರೆ, ಸಮವಸ್ತ್ರ ಹೊಂದಿರುವ ಬೇರೆ ಇಲಾಖೆಗಳಂತೆ ಅಬಕಾರಿ ಇಲಾಖೆಯಲ್ಲಿ ಶೇ.65 ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಹೆಚ್ಚಿಸುವಂತೆ ಅಬಕಾರಿ ಪೇದೆಯವರು ಅಳಲು ತೋಡಿಕೊಂಡಿದ್ದಾರೆ.
ವೇತನ ಶ್ರೇಣಿಯಲ್ಲಿ ಅನ್ಯಾಯ:
ಆರ್ಥಿಕ ಇಲಾಖೆಯ ಅಧೀನದ ವ್ಯಾಪ್ತಿಗೆ ಅಬಕಾರಿ ಇಲಾಖೆ ಬರುತ್ತದೆ. ಆದಾಯ ಸಂಗ್ರಹಣೆಯಲ್ಲಿ ರಾಜ್ಯದ 2ನೇ ಅತಿ ದೊಡ್ಡ ಇಲಾಖೆ ಇದಾಗಿದೆ. ಇಲಾಖೆಯಲ್ಲಿ ಒಟ್ಟು ಹುದ್ದೆಗಳಲ್ಲಿ ಅಂದಾಜು ಶೇ.65 ಹುದ್ದೆಯಲ್ಲಿ ಅಂದರೆ 2,591 ಅಬಕಾರಿ ಪೇದೆ, 831 ಹಿರಿಯ ಪೇದೆಗಳು ಇದ್ದಾರೆ. ಪೊಲೀಸ್, ಅರಣ್ಯ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಕಾರಾಗೃಹ ಇಲಾಖೆಗಳಿಗೆ ಹೋಲಿಸಿದರೆ ಇವರಿಗೆ ವೇತನ ಶ್ರೇಣಿಯಲ್ಲಿ ವ್ಯತ್ಯಾಸ ಇದೆ. ನೇಮಕಾತಿ ಸಮಯದಲ್ಲಿ ವೇತನ ಶ್ರೇಣಿ ಮತ್ತು ವೇತನ ಸಮನಾಗಿದ್ದು, ಈಗ ವ್ಯತ್ಯಾಸ ಕಂಡುಬಂದಿದೆ. ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಮುಖೇನ ಅಬಕಾರಿ ಪೇದೆಗಳ ಹುದ್ದೆಯನ್ನುನೇಮಕಾತಿ ಮಾಡಲಾಗುತ್ತಿದೆ. ಸಮವಸ ಇಲಾಖೆಗಳಿಗೆ ಇರುವಂಥ ಅರ್ಹತೆ ಮತ್ತು ಸೌಲಭ್ಯಗಳನ್ನು ಇವರು ಹೊಂದಬೇಕಾಗುತ್ತದೆ. ಹಾಗಾಗಿ, ಸಮವಸ ಹೊಂದಿರುವ ಇಲಾಖೆಗಳ ಸಿಬ್ಬಂದಿ ವೇತನ ಗಮನಿಸಿದಾಗ ಇವರ ವೇತನ ಶ್ರೇಣಿಯಲ್ಲಿ ಅನ್ಯಾಯವಾಗಿದೆ.